NCERT ಪುಸ್ತಕಗಳನ್ನು ಮಾತ್ರ ಸೂಚಿಸಿ : ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

Update: 2024-04-12 16:24 GMT

ಹೊಸದಿಲ್ಲಿ : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ತರಬೇತಿ ಮಂಡಳಿ(NCERT)ಯು ಶಿಫಾರಸು ಮಾಡಿರುವ ಪಠ್ಯಕ್ರಮವನ್ನು ಮಾತ್ರ ಅನುಸರಿಸುವಂತೆ ಒಂದು ವರ್ಷದ ಹಿಂದೆ ದೇಶಾದ್ಯಂತ ಶಾಲೆಗಳಿಗೆ ಸೂಚನೆ ನೀಡಿದ್ದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR)ವು ಅದರ ಅನುಷ್ಠಾನವನ್ನು ಖಚಿತಪಡಿಸುವಂತೆ ಮತ್ತೊಮ್ಮೆ ಎಲ್ಲ ಶಾಲೆಗಳಿಗೆ ಸೂಚಿಸಿದೆ. ಸೂಚನೆಯನ್ನು ಪಾಲಿಸುವಲ್ಲಿ ವೈಫಲ್ಯವು RTE ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಅದು ತಿಳಿಸಿದೆ.

ಕಳೆದ ವರ್ಷದ ಎಪ್ರಿಲ್ 9ರಂದು ಎಲ್ಲ ಶಾಲೆಗಳಿಗೆ ಇಂತಹುದೇ ಸೂಚನೆಯನ್ನು ರವಾನಿಸಿದ್ದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, NCERT ಶಿಫಾರಸು ಮಾಡಿರುವ ಪಠ್ಯಕ್ರಮವನ್ನು ಮಾತ್ರ ಬೋಧಿಸುವಂತೆ ತಿಳಿಸಿತ್ತು. ಶಾಲೆಗಳು ಖಾಸಗಿ ಪ್ರಕಾಶಕರು ಪ್ರಕಟಿಸಿದ ಪುಸ್ತಕಗಳನ್ನು ಶಿಫಾರಸು ಮಾಡಿದ ಹಲವು ನಿದರ್ಶನಗಳು ತನ್ನ ಗಮನಕ್ಕೆ ಬಂದಿವೆ ಎಂದು ಅದು ಆಗ ಹೇಳಿತ್ತು.

RTE ಕಾಯ್ದೆಯ 29ನೇ ಕಲಮನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸುವಂತೆಯೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಿಳಿಸಿದೆ. ಪ್ರಾಥಮಿಕ ಶಿಕ್ಷಣದ ಪಠ್ಯಕ್ರಮ ಮತ್ತು ಮೌಲ್ಯಮಾಪನ ವಿಧಾನವನ್ನು ‘ಸೂಕ್ತ’ ಸರಕಾರವು ನಿರ್ದಿಷ್ಟ ಪಡಿಸಿದ ಶೈಕ್ಷಣಿಕ ಪ್ರಾಧಿಕಾರವು ನಿಗದಿಗೊಳಿಸುವುದನ್ನು ಈ ಕಲಂ ಕಡ್ಡಾಯಗೊಳಿಸಿದೆ.

NCERT ಅಥವಾ ಎಸ್ಸಿಇಆರ್ಟಿ ಪ್ರಕಟಿಸಿರುವ ಅಥವಾ ಶಿಫಾರಸು ಮಾಡಿರುವ ಪುಸ್ತಕಗಳನ್ನು ತರುವ ಮಕ್ಕಳ ವಿರುದ್ಧ ಯಾವುದೇ ತಾರತಮ್ಯ ಅಥವಾ ಅವರಿಗೆ ಕಿರುಕುಳವಾಗದಂತೆ ನೋಡಿಕೊಳ್ಳುವಂತೆಯೂ ಶಾಲೆಗಳಿಗೆ ಸೂಚಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಇದು ಮಕ್ಕಳ ಮಾನಸಿಕ ಅಥವಾ ದೈಹಿಕ ನರಳುವಿಕೆಗೆ ಕಾರಣವಾಗಬಹುದು ಎಂದು ಹೇಳಿದೆ. ಮಗುವಿನ ವಿರುದ್ಧ ಇಂತಹ ಯಾವುದೇ ಕ್ರಮವು ಬಾಲನ್ಯಾಯ ಕಾಯ್ದೆಯಡಿ ಕ್ರಮವನ್ನು ಆಹ್ವಾನಿಸಬಹುದು ಎಂದು ಅದು ಎಚ್ಚರಿಕೆ ನೀಡಿದೆ.

ಈ ನಿರ್ದೇಶನಗಳನ್ನು ತಮ್ಮ ವಿಭಾಗ ವೆಬ್ ಸೈಟ್ ಗಳು ಮತ್ತು ನೋಟಿಸ್ ಬೋರ್ಡ್ ಗಳಲ್ಲಿ ಪ್ರದರ್ಶಿಸುವಂತೆ ಮತ್ತು ಅವುಗಳ ಪ್ರತಿಗಳನ್ನು ಪೋಷಕರಿಗೆ ವಿತರಿಸುವಂತೆಯೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತನ್ನ ಪತ್ರದಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News