ಗಡಿಯಾರ ಚಿಹ್ನೆ ಬಳಸಲು ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ
ಹೊಸದಿಲ್ಲಿ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಶರದ್‌ಪವಾರ್ ಬಣಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಎನ್‌ಸಿಪಿಯ ಅಜಿತ್‌ಪವಾರ್ ಬಣಕ್ಕೆ, ಪಕ್ಷವು ವಿಭಜನೆಗೊಳ್ಳುವ ಮುನ್ನ ಇದ್ದಂತಹ ಗಡಿಯಾರದ ಚಿಹ್ನೆಯನ್ನು ಬಳಸಿಕೊಳ್ಳಲು ಸುಪ್ರೀಂಕೋರ್ಟ್ ಗುರುವಾರ ಅನುಮತಿ ನೀಡಿದೆ.
ಆದರೆ ‘ಈ ವಿಷಯ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆಗೆ ಬಾಕಿಯಿದೆ’ ಎಂಬ ಹಕ್ಕು ನಿರಾಕರಣೆ ಹೇಳಿಕೆಯೊಂದಿಗೆ ಗಡಿಯಾರ ಚಿಹ್ನೆಯನ್ನು ಬಳಸಿಕೊಳ್ಳಬೇಕೆಂಬ ಶರತ್ತನ್ನು ವಿಧಿಸಿದೆ.
ಇಂದು ಆಲಿಕೆ ನಡೆಸಿದ ಸುಪ್ರೀಂಕೋರ್ಟ್, ವಿಧಾನಸಭಾ ಚುನಾವಣೆಯಲ್ಲಿ ಗಡಿಯಾರದ ಚಿಹ್ನೆಯನ್ನು ಬಳಸುವುದಕ್ಕೆ ಅಜಿತ್‌ಪವಾರ್ ಬಣಕ್ಕೆ ಅವಕಾಶ ನೀಡಬಾರದೆಂದು ಎನ್‌ಸಿಪಿಯ ಶರದ್ ಪವಾರ್ ಬಣವು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿತು.
ಚುನಾವಣಾ ಚಿಹ್ನೆಗೆ ಸಂಬಂಧಿಸಿ ನ್ಯಾಯಾಲಯವು ಈ ಹಿಂದೆ ನೀಡಿರುವ ಎರಡು ತೀರ್ಪುಗಳಿಗೆ ಬದ್ಧವಾಗಿರುವಂತೆ ಹಾಗೂ ಮಹಾರಾಷ್ಟ್ರದ ಹಾಲಿ ವಿಧಾನಸಭಾ ಚುನಾವಣೆಗಾಗಿನ ಎಲ್ಲಾ ಪ್ರಚಾರ ಸಾಮಾಗ್ರಿಗಳಲ್ಲಿ ಚಿಹ್ನೆಯ ಕುರಿತು ‘ಹಕ್ಕುನಿರಾಕರಣೆ’ಯ ಹೇಳಿಕೆಯನ್ನು ಕೂಡಾ ಪ್ರಕಟಿಸಬೇಕೆಂದು ಅಜಿತ್ ಪವಾರ್ ಬಣಕ್ಕೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತಾ ಹಾಗೂ ಉಜ್ಜಲ್ ಭೂಯಾನ್ ಅವರನ್ನು ಒಳಗೊಂಡ ನ್ಯಾಯಪೀಠವು ಆದೇಶ ನೀಡಿದೆ.
ಎನ್‌ಸಿಪಿಯು ವಿಭಜನೆಗೊಂಡ ಬಳಿಕ ಚುನಾವಣಾ ಆಯೋಗವು ಅಜಿತ್ ಪವಾರ್ ಬಣವನ್ನು ನೈಜ ಎನ್‌ಸಿಪಿಯೆಂದು ಪರಿಗಣಿಸಿ ಮಾನ್ಯತೆ ನೀಡಿದ್ದು, ವಿಭಜನೆಗೆ ಮುನ್ನ ಪಕ್ಷವು ಹೊಂದಿದ್ದ ಗಡಿಯಾರದ ಚಿಹ್ನೆಯನ್ನು ಅದಕ್ಕೆ ನೀಡಿತ್ತು.
ಮತದಾರರಲ್ಲಿ ಗೊಂದಲವನ್ನು ಸೃಷ್ಟಿಸುವುದಕ್ಕಾಗಿ ಅಜಿತ್ ಪವಾರ್ ಬಣವು ಅವಿಭಜಿತ ಎನ್‌ಸಿಪಿ ಪಕ್ಷವು ಹೊಂದಿದ್ದ ಗಡಿಯಾದ ಚಿಹ್ನೆಯನ್ನು ದುರ್ಬಳಕೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಚುನಾವಣಾ ಚಿಹ್ನೆಗಾಗಿ ಅರ್ಜಿ ಸಲ್ಲಿಸುವಂತೆ ಅದಕ್ಕೆ ಸೂಚಿಸಬೇಕೆಂದು ಕೋರಿ ಶರದ್‌ಪವಾರ್ ಬಣವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.