ಕೇಜ್ರಿವಾಲ್ ಜಾಮೀನು ಅವಧಿ ವಿಸ್ತರಣೆ ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಮಧ್ಯಂತರ ಜಾಮೀನನ್ನು ಒಂದು ವಾರ ವಿಸ್ತರಿಸಬೇಕೆಂದು ಕೋರಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವುದಿಲ್ಲ. ಈ ಅರ್ಜಿಯನ್ನು ಸುಪ್ರಿಂ ಕೋರ್ಟಿನ ರಿಜಿಸ್ಟ್ರಿ ಸ್ವೀಕರಿಸಲು ನಿರಾಕರಿಸಿದೆ. ಕೇಜ್ರಿವಾಲ್ ಅವರಿಗೆ ಸಾಮಾನ್ಯ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ವಿಚಾರಣಾ ನ್ಯಾಯಾಲಯದ ಮೊರೆ ಹೋಗಲು ಸ್ವಾತಂತ್ರ್ಯ ನೀಡಲಾಗಿರುವುದರಿಂದ ಈ ಅರ್ಜಿ ಮಾನ್ಯ ಮಾಡಲಾಗದು ಎಂದು ರಿಜಿಸ್ಟ್ರಿ ಹೇಳಿದೆ.
ವೈದ್ಯಕೀಯ ಕಾರಣಗಳನ್ನು ನೀಡಿ ಕೇಜ್ರಿವಾಲ್ ಅವರು ತಮ್ಮ ಮಧ್ಯಂತರ ಜಾಮೀನಿನ ಏಳು ದಿನ ವಿಸ್ತರಣೆ ಕೋರಿದ್ದರು. “ವಿವರಿಸಲಾಗದ ತೂಕ ಇಳಿಕೆಯು ಜೀವಕ್ಕೆ ಅಪಾಯವುಂಟು ಮಾಡಬಹುದಾದ ಕಾಯಿಲೆಯ ಲಕ್ಷಣವಾಗಿದೆ. ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯದ ಧೋರಣೆಯೂ ಸ್ವಲ್ಪ ಮಟ್ಟಿಗೆ ನನ್ನ ಆರೋಗ್ಯದ ಸಮಸ್ಯೆಗೆ ಕಾರಣ. ಇನ್ನೊಂದು ವಾರ ಜಾಮೀನು ವಿಸ್ತರಿಸಿದರೆ ಆರೋಗ್ಯ ಸಮಸ್ಯೆಗಳತ್ತ ಗಮನ ನೀಡಲು ಸಹಕಾರಿಯಾಗಲಿದೆ,” ಎಂದು ತಮ್ಮ ಅರ್ಜಿಯಲ್ಲಿ ಕೇಜ್ರಿವಾಲ್ ಹೇಳಿದ್ದರು.
ಕೇಜ್ರಿವಾಲ್ ಅವರ ಜಾಮೀನು ಅರ್ಜಿಯ ತುರ್ತು ವಿಚಾರಣೆ ನಡೆಸಲು ಮಂಗಳವಾರ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.