ಪಶ್ಚಿಮ ಬಂಗಾಳ ಅಧಿಕಾರಿಗಳ ವಿರುದ್ಧದ ಲೋಕಸಭಾ ಸಮಿತಿ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

Update: 2024-02-19 13:56 GMT

 ಸುಪ್ರೀಂ ಕೋರ್ಟ್ | Photo: PTI 

ಹೊಸದಿಲ್ಲಿ: ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಲೋಕಸಭಾ ಹಕ್ಕುಬಾಧ್ಯತಾ ಸಮಿತಿಯು ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕ ಸೇರಿದಂತೆ ರಾಜ್ಯದ ಹಿರಿಯ ಅಧಿಕಾರಿಗಳಿಗೆ ನೀಡಿರುವ ನೋಟಿಸ್‌ ನ ಆಧಾರದಲ್ಲಿ ಮುಂದಿನ ಕಲಾಪಗಳನ್ನು ನಡೆಸದಂತೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

ತನ್ನೊಂದಿಗೆ ‘‘ಅನುಚಿತವಾಗಿ ಮತ್ತು ಅಮಾನುಷವಾಗಿ ವರ್ತಿಸಲಾಗಿದೆ ಹಾಗೂ ಜೀವಕ್ಕೆ ಅಪಾಯವಾಗುವ ಗಾಯಗಳನ್ನು ಮಾಡಲಾಗಿದೆ’’ ಎಂದು ಆರೋಪಿಸಿ ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಸುಕಾಂತ ಮಜುಂದಾರ್ ಸಲ್ಲಿಸಿದ ದೂರಿನ ಆಧಾರದಲ್ಲಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು.

ಕಳೆದ ವಾರ ಸಂದೇಶಕಾಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಸಂಸದ ಮಜುಂದಾರ್ ಗಾಯಗೊಂಡಿದ್ದರು ಎನ್ನಲಾಗಿದೆ. ಆ ಬಳಿಕ, ತನ್ನ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಅವರು ಸಂಸದೀಯ ಸಮಿತಿಗೆ ದೂರು ನೀಡಿದ್ದರು.

ಸಂದೇಶಕಾಳಿಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ನ ನಾಯಕರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಫೆಬ್ರವರಿ 19ರಂದು ತನ್ನೆದುರು ಹಾಜರಾಗುವಂತೆ ಸಮಿತಿಯು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಭಗವತಿ ಪ್ರಸಾದ್ ಗೋಪಾಲಿಕ, ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್, ಉತ್ತರ 24 ಪರಗಣ ಜಿಲ್ಲಾ ಮ್ಯಾಜಿಸ್ಟ್ರೇಟ್ ಶರದ್ ಕುಮಾರ್ ದ್ವಿವೇದಿ, ಬಸಿರ್ಹತ್ ಪೊಲೀಸ್ ಸೂಪರಿಂಟೆಂಡೆಂಟ್ ಹುಸೈನ್ ಮೆಹದಿ ರೆಹಮಾನ್ ಮತ್ತು ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಪಾರ್ಥ ಘೋಷ್ರಿಗೆ ಸಮನ್ಸ್ ನೀಡಿತ್ತು.

ಈ ಅಧಿಕಾರಿಗಳ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠವೊಂದು, ಲೋಕಸಭಾ ಹಕ್ಕುಬಾಧ್ಯತಾ ಸಮಿತಿಯ ಸಮನ್ಸ್ಗೆ ತಡೆಯಾಜ್ಞೆ ನೀಡಿದೆ.

ಅರ್ಜಿದಾರರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ‘‘ರಾಜಕೀಯ ಚಟುವಟಿಕೆ’’ಗಳಿಗೆ ಸಂಸದೀಯ ಹಕ್ಕುಬಾಧ್ಯತೆಯು ಅನ್ವಯಿಸುವುದಿಲ್ಲ ಎಂದು ಹೇಳಿದರು.

‘‘ಫೆಬ್ರವರಿ 13ರ ಬೆಳಗ್ಗೆ 6 ಗಂಟೆಯ ಹೊತ್ತಿಗೇ 144ನೇ ವಿಧಿಯಂತೆ ನಿಷೇಧಾಜ್ಞೆ ಹೇರಲಾಗಿತ್ತು. ಹಾಗಾಗಿ, ಈ ದೂರೇ ಸುಳ್ಳಾಗಿದೆ. ಘರ್ಷಣೆಯಲ್ಲಿ ಎಂಟು ಮಹಿಳಾ ಪೊಲೀಸ್ ಸೇರಿದಂತೆ 38 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರದೇ ತಂಡದ ಮಹಿಳೆಯೊಬ್ಬರು ಸಂಸದರನ್ನು ದೂಡಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಅದರಿಂದಾಗಿ ಅವರು ಗಾಯಗೊಂಡಿದ್ದಾರೆ. ನಾವು ಆ ವೀಡಿಯೊವನ್ನು ತೋರಿಸುತ್ತೇವೆ’’ ಎಂದು ಕಪಿಲ್ ಸಿಬಲ್ ನುಡಿದರು.

‘‘ಮಜುಂದಾರ್ ಆ ಸ್ಥಳದ ಸಂಸದರೂ ಅಲ್ಲ’’ ಎಂದರು.

ಬಳಿಕ, ನ್ಯಾಯಾಲಯವು ಹಕ್ಕುಚ್ಯುತಿ ಕಲಾಪಗಳಿಗೆ ತಡೆಯಾಜ್ಞೆ ನೀಡಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News