ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹೇಮಂತ್ ಸೊರೆನ್
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ತಮ್ಮನ್ನು ಬಂಧಿಸಿರುವ ಕ್ರಮದ ವಿರುದ್ಧ ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸೊರೆನ್ ಅವರ ಅರ್ಜಿ ವಿಚಾರಣೆಯು ನಾಳೆ (ಶುಕ್ರವಾರ) ನಡೆಯಲಿದೆ.
ಜಾರಿ ನಿರ್ದೇಶನಾಲಯವು ತಮ್ಮನ್ನು ಬಂಧಿಸಿರುವುದರ ವಿರುದ್ಧ ಹೇಮಂತ್ ಸೊರೇನ್ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಪ್ರತಿನಿಧಿಸಲಿದ್ದಾರೆ.
ಈ ನಡುವೆ, ಜಾರ್ಖಂಡ್ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ತಮ್ಮ ಪ್ರಕರಣವನ್ನು ಹಿಂಪಡೆಯುದಾಗಿ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ಗೆ ತಿಳಿಸಿದರು.
ಹೇಮಂತ್ ಸೊರೇನ್ ಅವರ ಅರ್ಜಿಯನ್ನು ಉಲ್ಲೇಖಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಸಾವಿರಾರು ಮಂದಿಯನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ. ಅವರೆಲ್ಲರೂ ಸುಪ್ರೀಂ ಕೋರ್ಟ್ ಗೆ ಬರಲು ಸಾಧ್ಯವಿಲ್ಲ” ಎಂದು ವಾದಿಸಿದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಕಪಿಲ್ ಸಿಬಲ್, “ಎಲ್ಲರೂ ಚುನಾವಣೆಗೂ ಮುನ್ನವೇ ಬಂಧನಕ್ಕೊಳಗಾಗುತ್ತಾರೆ” ಎಂದು ವ್ಯಂಗ್ಯವಾಡಿದರು.
ಭೂ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಗುರಿಯಾಗಿರುವ ಹೇಮಂತ್ ಸೊರೇನ್ ಅವರನ್ನು ಸುದೀರ್ಘ ಏಳು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದ ಜಾರಿ ನಿರ್ದೇಶನಾಲಯವು, ನಂತರ ಅವರನ್ನು ಬಂಧಿಸಿತ್ತು.