ಪಾರದರ್ಶಕ ಚುನಾವಣಾ ಬಾಂಡ್ ಗೆ ಸುಪ್ರೀಂ ಒಲವು

Update: 2023-11-02 02:25 GMT

Photo: PTI

ಹೊಸದಿಲ್ಲಿ: ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ದೊಡ್ಡಮೊತ್ತದ ಕೊಡುಗೆಗಳನ್ನು ಒಳಗೊಂಡ ಚುನಾವಣಾ ಬಾಂಡ್ಗಳ ಮಾನ್ಯತೆಯನ್ನು ಪರಿಶೀಲಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮೇಲ್ನೋಟಕ್ಕೆ, ಈ ಯೋಜನೆಯ ಪಾರದರ್ಶಕತೆಯಲ್ಲಿ ಕೆಲವೊಂದು ಲೋಪಗಳನ್ನು ಪಟ್ಟಿ ಮಾಡಿದೆ. ಆದರೆ ಸರ್ಕಾರ ಹಾಲಿ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ದಾನಿಗಳ ವಿವರಗಳನ್ನು ಬಹಿರಂಗಪಡಿಸಿದರೆ ಅದು ಪ್ರತೀಕಾರ ಮತ್ತು ದಾನಿಗಳನ್ನು ಬಲಿಪಶು ಮಾಡಲು ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದೆ.

ಪ್ರಸ್ತುತ ವ್ಯವಸ್ಥೆಯು "ಮಾಹಿತಿ ಹರಿವಿಗೆ ಕಪ್ಪುಚುಕ್ಕೆ" ಎಂದು ಸುಪ್ರೀಂಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠದ ಮುಂದೆ ಹಾಲಿ ಜಾರಿಯಲ್ಲಿರುವ ಚುನಾವಣಾ ಬಾಂಡ್ ವ್ಯವಸ್ಥೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಪರವಾಗಿ ಹಿರಿಯ ವಕೀಲ ವಿಜಯ ಹನ್ಸಾರಿಯಾ ಅವರು ವಾದ ಮಂಡಿಸಿದರು. ಹಾಲಿ ಇರುವ ವ್ಯವಸ್ಥೆಯಲ್ಲಿ ದಾನಿಗಳ ಹೆಸರನ್ನು ರಾಜಕೀಯ ಪಕ್ಷಗಳಿಂದ ಗೌಪ್ಯವಾಗಿ ಇಡಲಾಗುತ್ತದೆ ಎಂದು ವಿವರಿಸಿದರು.

"ಈ ಬಾಂಡ್ ನೀಡುವ ಭಾರತೀಯ ಸ್ಟೇಟ್ ಬ್ಯಾಂಕ್ ಅಥವಾ ಕಾನೂನು ಜಾರಿ ಏಜೆನ್ಸಿಗಳಿಗೆ ಇದು ಗೌಪ್ಯವಲ್ಲ. ಈ ಮೂಲಕ ಯಾರು ವಿರೋಧ ಪಕ್ಷಗಳಿಗೆ ದೇಣಿಗೆ ನೀಡಿದ್ದಾರೆ ಎನ್ನುವ ಅಂಶ ಸರ್ಕಾರಕ್ಕೆ ತಿಳಿಯುತ್ತದೆ. ಆದರೆ ಆಡಳಿತ ಪಕ್ಷಕ್ಕೆ ಯಾರು ದೇಣಿಗೆ ನೀಡಿದ್ದಾರೆ ಎಂಬ ಅಂಶ ವಿರೋಧ ಪಕ್ಷಗಳಿಗೆ ತಿಳಿಯುವುದಿಲ್ಲ. ಇದು ಯೋಜನೆಯ ಅಸಮತೋಲನವನ್ನು ಸೂಚಿಸುತ್ತದೆ" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮತ್ತೊಂದು ಸಮಸ್ಯೆಯೆಂದರೆ, ದಾನಿಗಳು ಚುನಾವಣಾ ಬಾಂಡ್ನ ಖರೀದಿದಾರರಾಗಿರಬೇಕಿಲ್ಲ. ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡುವ ಕಾರ್ಪೊರೇಟ್ ಸಂಸ್ಥೆಗಳು, ಮೂಲ ಬೆಲೆಯ ಜತೆಗೆ ಪ್ರಿಮಿಯಂ ಪಾವತಿಸುವ ಮೂಲಕ ಬಾಂಡ್ ಖರೀದಿ ಮಾಡುವಂತೆ ಬಹಳಷ್ಟು ಮಂದಿ ವ್ಯಕ್ತಿಗಳಿಗೆ ಸೂಚನೆ ನೀಡಬಹುದು. ಬಳಿಕ ಎಲ್ಲವನ್ನೂ ಒಟ್ಟಾಗಿ ರಾಜಕೀಯ ಪಕ್ಷಗಳಿಗೆ ನೀಡಬಹುದು. ಇದರಲ್ಲಿ ಕಪ್ಪುಹಣದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ" ಎಂದು ನ್ಯಾಯಪೀಠ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News