ತಮಿಳುನಾಡು | ಎರಡು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ

PC : ANI
ಚೆನ್ನೈ: ತಮಿಳುನಾಡಿನ ಈರೋಡ್ ಜಿಲ್ಲೆಯ ಎರಡು ಶಾಲೆಗಳಿಗೆ ಮಂಗಳವಾರ ಬಾಂಬ್ ಬೆದರಿಕೆಗಳು ಬಂದಿದ್ದು, ಪೋಲಿಸ್ ತನಿಖೆಯ ಬಳಿ ಅವು ಹುಸಿ ಎನ್ನುವುದು ದೃಢಪಟ್ಟಿದೆ.
ಪೂರ್ವಾಹ್ನ 11:54ಕ್ಕೆ ಬಂದಿದ್ದ ಇಮೇಲ್‌ನಲ್ಲಿ ತ್ರೆಕ್ಕುಪಲ್ಲಂ ಮತ್ತು ಥಿಂಡಲ್‌ನಲ್ಲಿ ಭಾರತಿ ವಿದ್ಯಾ ಭವನವು ನಡೆಸುತ್ತಿರುವ ಎರಡು ಶಾಲೆಗಳಲ್ಲಿ ಬಾಂಬ್‌ಗಳನ್ನಿರಿಸಲಾಗಿದ್ದು,ಅವು ಯಾವುದೇ ಕ್ಷಣದಲ್ಲಿ ಸ್ಫೋಟಗೊಳ್ಳಬಹುದು ಎಂದು ಬೆದರಿಕೆಯನ್ನು ಒಡ್ಡಲಾಗಿತ್ತು. ಈ ಶಾಲೆಗಳು ಈರೋಡ್‌ನಿಂದ ಏಳು ಕಿ.ಮೀ.ದೂರದಲ್ಲಿವೆ.
ಶಾಲೆ ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನದಳಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಮಗ್ರ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು.
ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಿ ಎಲ್ಲ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿತ್ತು. ಅಪರಾಹ್ನ 3:30ರ ಸುಮಾರಿಗೆ ಶೋಧ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ಪೋಲಿಸರು ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಘೋಷಿಸಿದರು.