ಮಿಚಾಂಗ್ ಚಂಡಮಾರುತ: ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಿದ ಸಿಎಂ ಸ್ಟಾಲಿನ್
ಚೆನ್ನೈ: ಮಿಚಾಂಗ್ ಚಂಡಮಾರುತದಿಂದ ಸಂಭವಿಸಿದ ಮಳೆ ಹಾಗೂ ನೆರೆಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರವಿವಾರ ತಲಾ 6 ಸಾವಿರ ರೂ. ನಗದು ಪರಿಹಾರ ಬಿಡುಗಡೆ ಮಾಡಿದರು.
ನಗದು ಪರಿಹಾರ ನೀಡಲು ರಾಜ್ಯ ಸರಕಾರ 1,486.93 ಕೋ.ರೂ. ಮಂಜೂರು ಮಾಡಿದೆ. ಚೆನ್ನೈ, ತಿರುವಳ್ಳೂರು, ಚೆಂಗಲ್ಪೇಟ್ ಹಾಗೂ ಕಾಂಚಿಪುರಂ ಜಿಲ್ಲೆಗಳಾದ್ಯಂತದ ಸುಮಾರು 25 ಲಕ್ಷ ಕುಟುಂಬಗಳು ಈ ಸೌಲಭ್ಯ ಪಡೆಯಲಿವೆ.
ನೆರೆಯಿಂದ ಅತಿ ಹೆಚ್ಚು ಹಾನಿಗೀಡಾದ ಪ್ರದೇಶಗಳಲ್ಲಿ ಒಂದಾದ ವೆಲಚೇರಿಯ ಕುಟುಂಬದ ಮಹಿಳೆಗೆ ರವಿವಾರ ನಗದು ನೀಡುವ ಮೂಲಕ ಸ್ಟಾಲಿನ್ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಚಿವರು, ಚುನಾಯಿತ ಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪಡಿತರ ಅಂಗಡಿಗಳಲ್ಲಿ ನಗದು ವಿತರಿಸುವ ದಿನಾಂಕ ಹಾಗೂ ಸಮಯವನ್ನು ನಿರ್ದಿಷ್ಟಪಡಿಸುವ ಟೋಕನ್ ಗಳ ವಿತರಣೆ ಕಾರ್ಯ ಎರಡು ದಿನಗಳ ಹಿಂದೆ ಆರಂಭವಾಗಿದೆ. ನಗದು ಪರಿಹಾರ ಪಡೆಯಲು ಟೋಕನ್ ಪಡೆಯದವರು ಪಡಿತರ ಅಂಗಡಿಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸರಕಾರದ ಪತ್ರಿಕಾ ಹೇಳಿಕೆ ತಿಳಿಸಿದೆ.
ಒಟ್ಟು 24,25,336 ಕುಟುಂಬಗಳು ಈ ಪರಿಹಾರದ ಪ್ರಯೋಜನ ಪಡೆಯಲಿವೆ. ಚೆನ್ನೈಯಲ್ಲಿ ಹೆಚ್ಚಿನ ಫಲಾನುಭವಿಗಳು, ಅಂದರೆ ಸರಿ ಸುಮಾರು 13.72 ಲಕ್ಷ ಕುಟುಂಬಗಳು, ತಿರುವಳ್ಳೂರ್ನಲ್ಲಿ 6.08 ಲಕ್ಷ, ಚೆಂಗಲ್ಪೇಟ್ ನಲ್ಲಿ 3.12 ಲಕ್ಷ, ಕಾಂಚಿಪುರಂನಲ್ಲಿ 1,31,149 ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ.
ನೆರೆ ಸಂತ್ರಸ್ತರಿಗೆ ತಲಾ 6 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಡಿಸೆಂಬರ್ 9ರಂದು ಘೋಷಿಸಿದ್ದರು.