ರಾಜ್ಯಗಳಿಗೆ ಸಾಲ ಪಡೆಯುವಲ್ಲಿ ನಿರ್ಬಂಧಗಳ ವಿರುದ್ಧ ಕೇರಳದ ಹೋರಾಟಕ್ಕೆ ಬೆಂಬಲ ಸೂಚಿಸಿದ ತಮಿಳುನಾಡು ಸಿಎಂ ಸ್ಟಾಲಿನ್‌

Update: 2024-02-06 10:39 GMT

ಎಂ. ಕೆ. ಸ್ಟಾಲಿನ್‌ / ಪಿಣರಾಯಿ ವಿಜಯನ್‌ (Photo: thenewsminute.com)

ಚೆನ್ನೈ: ಕೇರಳ ಮತ್ತು ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ಹೇರಿರುವ “ನಿರಂಕುಶ ಮತ್ತು ತಾರತಮ್ಯಕಾರಿ ಸಾಲ ಪಡೆಯುವ ನಿಯಮಗಳನ್ನು” ವಿರೋಧಿಸುತ್ತಿರುವ ಕೇರಳ ಸರ್ಕಾರದ ಪ್ರಯತ್ನಗಳಿಗೆ ತಮಿಳುನಾಡು ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್‌ ಹೇಳಿದ್ದಾರೆ.

“ಈ ತಾರತಮ್ಯ ಕೆಲ ಸಮಯದಿಂದ ಇದ್ದರೂ ಕಳೆದ ಕೆಲ ವರ್ಷಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಹಾಗೂ ರಾಜ್ಯದ ಆರ್ಥಿಕತೆಗಳ ಮೇಲೆ ಈ ರೀತಿಯ ಪರೋಕ್ಷ ನಿಯಂತ್ರಣಗಳ ವಿರುದ್ಧ ಪ್ರಗತಿಪರ ರಾಜ್ಯ ಸರ್ಕಾರಗಳ ನಡುವೆ ಸ್ಪಷ್ಟ ಸಹಮತವಿದೆ,” ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಸ್ಟಾಲಿನ್‌ ಹೇಳಿದ್ದಾರೆ.

“ಸಂಪನ್ಮೂಲಗಳನ್ನು ಪಡೆದುಕೊಳ್ಳಲು ಹಾಗೂ ತಮ್ಮ ನೀತಿ ಆದ್ಯತೆಗಳಿಗೆ ಅನುಸಾರವಾಗಿ ಮಹತ್ವದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ರಾಜ್ಯ ಸರ್ಕಾರಗಳ ಸಾಮರ್ಥ್ಯವನ್ನು ಹತ್ತಿಕ್ಕುವ ಉದ್ದೇಶವಿದೆ ಎಂದು ತೋರುತ್ತದೆ. ಎಲ್ಲಾ ಸಮಾನ-ಮನಸ್ಕ ಪ್ರಗತಿಪರ ರಾಜ್ಯಗಳು ಇದನ್ನು ವಿರೋಧಿಸಬೇಕು,” ಎಂದು ಸ್ಟಾಲಿನ್‌ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ವಿತ್ತೀಯ ಕೊರತೆಯನ್ನು ನೀಗಿಸಲು ಸಾಲ ಪಡೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಅನುಮತಿ ನಿರಾಕರಿಸಲು ಕೇಂದ್ರ ಸರ್ಕಾರದ ಯತ್ನಗಳ ವಿರುದ್ಧ ಕೇರಳ ಸರ್ಕಾರ ಎರಡು ತಿಂಗಳ ಹಿಂದೆ ಸುಪ್ರೀಂ ಕೋರ್ಟ್‌ ಕದ ತಟ್ಟಿತ್ತು.

ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್‌ ನಿರ್ವಹಣೆ ಕಾಯಿದೆ 2003 ಗೆ “ಸಾಮಾನ್ಯ ಸರ್ಕಾರಿ ಸಾಲ” ಎಂಬ ಪದವನ್ನು ಸೇರಿಸಿರುವುದನ್ನೂ ಕೇರಳ ವಿರೋಧಿಸಿದೆಯಲ್ಲದೆ ಮಾರುಕಟ್ಟೆಯಿಂದ ಸಾಲ ಪಡೆಯುವಲ್ಲಿ ರಾಜ್ಯ ಸರ್ಕಾರಗಳಿಗಿರುವ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನ ಇದಾಗಿದೆ ಎಂದು ಕೇರಳ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News