ರಾಜ್ಯಪಾಲ ಹುದ್ದೆಯನ್ನು ತ್ಯಜಿಸಿದ ನಂತರ ಬಿಜೆಪಿಗೆ ಮರು ಸೇರ್ಪಡೆಯಾದ ತಮಿಳಿಸೈ ಸೌಂದರರಾಜನ್
ಚೆನ್ನೈ: ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಬುಧವಾರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಸಮ್ಮುಖದಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾದರು.
ರಾಜ್ಯಪಾಲ ಹುದ್ದೆಯನ್ನು ಹೊಂದಿದ್ದ ತಮಿಳಿಸೈ ಸೌಂದರರಾಜನ್ ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಕುರಿತು ಎಡಪಕ್ಷಗಳು ಹಾಗೂ ಡಿಎಂಕೆ ಪಕ್ಷದ ಟೀಕೆಯನ್ನು ಉಲ್ಲೇಖಿಸಿದ ಅಣ್ಣಾಮಲೈ, “ಉನ್ನತ ಮಟ್ಟದ ಹುದ್ದೆಗಳನ್ನು ತೊರೆದು, ಮತ್ತೆ ಸಾಮಾನ್ಯ ವ್ಯಕ್ತಿಗಳಂತೆ ಸಾರ್ವಜನಿಕರಿಗಾಗಿ ಕೆಲಸ ಮಾಡುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ” ಎಂದು ಹೇಳಿದರು.
ಬಿಜೆಪಿಯನ್ನು ಹೊರತುಪಡಿಸಿ ಇತರ ರಾಜಕೀಯ ಪಕ್ಷಗಳ ನಾಯಕರು ಉನ್ನತಾಧಿಕಾರಗಳನ್ನು ತೊರೆಯುವುದಿಲ್ಲ. ಅವರಿಗೆ ರಾಜಕೀಯವೆಂದರೆ ಉನ್ನತ ಅಧಿಕಾರಗಳನ್ನು ಪಡೆಯುವ ಸಾಧನ ಮಾತ್ರ ಎಂದು ಅವರು ವ್ಯಂಗ್ಯವಾಡಿದರು.
ಆಕೆ ರಾಜ್ಯಪಾಲೆಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರು. ಅಂತಹ ಹುದ್ದೆಯನ್ನು ತೊರೆದು ಮತ್ತೆ ರಾಜಕೀಯಕ್ಕೆ ಸೇರ್ಪಡೆಯಾಗುತ್ತಿರುವುದು ಅವರಿಗೆ ಜನರ ಬಗೆಗಿರುವ ಪ್ರೀತಿಯನ್ನು ತೋರಿಸುತ್ತದೆ ಎಂದೂ ಅವರು ಪ್ರಶಂಸಿಸಿದರು.
ಅವರು ಮತ್ತೆ ಬಿಜೆಪಿಯನ್ನು ಸೇರ್ಪಡೆಯಾಗಿರುವುದು, ಅವರಿಗೆ ಪಕ್ಷದ ಬಗೆಗಿರುವ ಬದ್ಧತೆಯನ್ನು ತೋರುತ್ತದೆ. ಸತತ ಮೂರನೆಯ ಬಾರಿಗೆ ಪ್ರಧಾನಿಯಾಗಲಿರುವ ನರೇಂದ್ರ ಮೋದಿಯವರ ಕೈ ಬಲಪಡಿಸುವಲ್ಲಿ ಅವರ ದೃಢ ನಿಶ್ಚಯದ ಕೆಲಸವು ಕೊಡುಗೆ ನೀಡುವಂತಾಗಲಿ ಎಂದು ಅಣ್ಣಾಮಲೈ ಆಶಿಸಿದರು.
ಬಿಜೆಪಿಗೆ ರಾಜಿನಾಮೆ ನೀಡಿದ ನಂತರ, 2019ರಲ್ಲಿ ತೆಲಂಗಾಣ ರಾಜ್ಯಪಾಲೆಯಾಗಿ ನೇಮಕವಾಗಿದ್ದ ತಮಿಳಿಸೈ ಸೌಂದರ್ ರಾಜನ್, 2021ರಲ್ಲಿ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದರು.
62 ವರ್ಷ ವಯಸ್ಸಿನ ತಮಿಳಿಸೈ ಸೌಂದರರಾಜನ್ ಸ್ತ್ರೀರೋಗ ತಜ್ಞೆಯಾಗಿದ್ದು, ಅವರು ಸುಮಾರು ಎರಡು ದಶಕಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.
#WATCH | Chennai, Tamil Nadu | Tamilisai Soundararajan rejoins BJP, two days after she resigned from the posts of Telangana Governor and Puducherry Lt Governor. pic.twitter.com/S7QJuJ7iWa
— ANI (@ANI) March 20, 2024