ತೆರಿಗೆ ವಂಚನೆ : ಐಟಿ ದಿಗ್ಗಜ ಇನ್ಫೋಸಿಸ್ ಗೆ ಅಮೆರಿಕದ ತೆರಿಗೆ ಇಲಾಖೆಯಿಂದ 18,702 ರೂ.ದಂಡ
ಹೊಸದಿಲ್ಲಿ : ಭಾರತದ ಅತ್ಯಂತ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ ಐಟಿ ದಿಗ್ಗಜ ಇನ್ಫೋಸಿಸ್ ವಿಶ್ವಾದ್ಯಂತ ಗ್ರಾಹಕರನ್ನು ಹೊಂದಿದೆ. 6,84,000 ಕೋ.ರೂ.ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಕಂಪನಿಯು ಪ್ರಸ್ತುತ 56ಕ್ಕೂ ಹೆಚ್ಚಿನ ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ವ್ಯಾವಹಾರಿಕ ಪ್ರಕಟಣೆಗಳು, ಸ್ವಾಧೀನಗಳು, ಉದ್ಯೋಗಿಗಳ ನೇಮಕ ಇತ್ಯಾದಿಗಳಿಂದಾಗಿ ಇನ್ಫೋಸಿಸ್ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಆದಾಗ್ಯೂ ಕಂಪನಿಯು ಈಗ ಸಂಪೂರ್ಣ ವಿಭಿನ್ನ ಕಾರಣದಿಂದಾಗಿ ಸುದ್ದಿಯಲ್ಲಿದೆ. ಅದು ತೆರಿಗೆ ವಂಚನೆ ಆರೋಪದಲ್ಲಿ ಸಿಕ್ಕಿಕೊಂಡಿದೆ.
ಕಂಪನಿಯು ಶೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿರುವ ಹೇಳಿಕೆಯಂತೆ ನಿಗದಿತ ಮೊತ್ತಕ್ಕಿಂತ ಕಡಿಮೆ ಉದ್ಯಮ ತೆರಿಗೆಯನ್ನು ಪಾವತಿಸಿದ್ದಕ್ಕಾಗಿ ಅಮೆರಿಕದ ನೆವಾಡಾ ತೆರಿಗೆ ಇಲಾಖೆಯು ಅದಕ್ಕೆ 18,702 ರೂ.ಗಳ ದಂಡವನ್ನು ವಿಧಿಸಿದೆ.
ಇನ್ಫೋಸಿಸ್ ನ ಬೃಹತ್ ಹಣಕಾಸು ವಹಿವಾಟುಗಳಿಗೆ ಹೋಲಿಸಿದರೆ ಈ ದಂಡದ ಮೊತ್ತ ಏನೇನೂ ಅಲ್ಲ,ನಿಜ. ಆದರೆ ತೆರಿಗೆ ಪಾವತಿಯಲ್ಲಿ ಅಕ್ರಮದ ಆರೋಪ ಈ ಪ್ರತಿಷ್ಠಿತ ಕಂಪನಿಯ ಹೆಗಲಿಗೇರಿದೆ. 2021ನೇ ಸಾಲಿನ ನಾಲ್ಕನೇ ಮತ್ತು 2022ನೇ ಸಾಲಿನ ಮೊದಲ ತ್ರೈಮಾಸಿಕಗಳಿಗೆ ಶಾರ್ಟ್ ಪೇಮೆಂಟ್ ಮಾಡಿರುವ ಆರೋಪವು ಕಂಪನಿಯನ್ನು ಸುತ್ತಿಕೊಂಡಿದೆ.
ಏನಿದು ಶಾರ್ಟ್ ಪೇಮೆಂಟ್?
ಇನ್ಫೋಸಿಸ್ ಅಮೆರಿಕದಲ್ಲಿ ವಹಿವಾಟು ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಅದು ಉದ್ಯಮ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ತೆರಿಗೆ ಪಾವತಿ ಸಮಯದಲ್ಲಿ ಇನ್ವಾಯ್ಸ್ನಲ್ಲಿ ನಮೂದಿತ ಮೊತ್ತಕ್ಕಿಂತ ಕಡಿಮೆ ಹಣವನ್ನು ಅದು ಪಾವತಿಸಿತ್ತು. ಇದನ್ನು ಶಾರ್ಟ್ ಪೇಮೆಂಟ್ ಎನ್ನಲಾಗುತ್ತದೆ. ಇದಕ್ಕಾಗಿ ದಂಡವನ್ನು ಪಾವತಿಸುವಂತೆ ನೆವಾಡಾ ತೆರಿಗೆ ಇಲಾಖೆಯು ಇನ್ಫೋಸಿಸ್ ಗೆ ನೋಟಿಸನ್ನು ಜಾರಿಗೊಳಿಸಿದೆ.
ಈ ಬೆಳವಣಿಗೆಯು ಕಂಪನಿಯ ಹಣಕಾಸುಗಳು, ಕಾರ್ಯಾಚರಣೆಗಳು ಅಥವಾ ಇತರ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಇನ್ಫೋಸಿಸ್ ಸಮರ್ಥಿಸಿಕೊಂಡಿದೆ.
ಇದು ಮೊದಲ ಸಲವಲ್ಲ
ಅಂದ ಹಾಗೆ ಶಾರ್ಟ್ ಪೇಮೆಂಟ್ಗಾಗಿ ಇನ್ಫೋಸಿಸ್ ಗೆ ದಂಡವನ್ನು ವಿಧಿಸಿರುವುದು ಇದು ಮೊದಲ ಸಲವೇನಲ್ಲ. 2023 ಆಗಸ್ಟ್ ನಲ್ಲಿ ಫ್ಲೋರಿಡಾದ ಕಂದಾಯ ಇಲಾಖೆಯು ತೆರಿಗೆಯಲ್ಲಿ ಶಾರ್ಟ್ ಪೇಮೆಂಟ್ಗಾಗಿ ಅದಕ್ಕೆ 76.92 ಡಾಲರ್ ದಂಡವನ್ನು ವಿಧಿಸಿತ್ತು. 2023 ಅಕ್ಟೋಬರ್ನಲ್ಲಿ ಕಾಮನ್ವೆಲ್ತ್ ಆಫ್ ಮಸಾಚುಸೆಟ್ಸ್ ಕಂಪನಿಯ ಮೇಲೆ 1,101.96 ಡಾಲರ್ ದಂಡವನ್ನು ಹೇರಿತ್ತು.
ಕಳೆದ ವರ್ಷದ ಸೆಪ್ಟಂಬರ್ನಲ್ಲಿ ಭಾರತದ ವಾಣಿಜ್ಯ ತೆರಿಗೆ ಇಲಾಖೆಯು 26.5 ಲಕ್ಷ ರೂ.ಗಳ ಏಕೀಕೃತ ಸರಕುಗಳು ಮತ್ತು ಸೇವೆಗಳ ತೆರಿಗೆ ಬಾಕಿಯನ್ನು ದಂಡ ಮತ್ತು ಬಡ್ಡಿ ಸಹಿತ ಕಟ್ಟುವಂತೆ ಕಂಪನಿಗೆ ನೋಟಿಸನ್ನು ಜಾರಿಗೊಳಿಸಿತ್ತು.