ತೆಲಂಗಾಣ ಚುನಾವಣೆಯಿಂದ ಹೊರಗುಳಿಯಲು ನಿರ್ಧರಿಸಿದ ಟಿಡಿಪಿ
ಹೈದರಾಬಾದ್: ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷವು ತೆಲಂಗಾಣ ಚುನಾವಣೆಯಿಂದ ಹೊರಗುಳಿಯಲು ನಿರ್ಧರಿಸಿದೆ ಎಂದು ಆ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ ಎಂದು NDTV ಸುದ್ದಿ ಸಂಸ್ಥೆ ವರದಿ ಮಾಡಿದೆ.
ತೆಲಂಗಾಣ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಕಸನಿ ಜ್ಞಾನೇಶ್ವರ್ ಅವರು ರಾಜಮುಂಡ್ರಿ ಕೇಂದ್ರ ಕಾರಾಗೃಹದಲ್ಲಿ ಚಂದ್ರಬಾಬು ನಾಯ್ಡು ಅವರೊಂದಿಗೆ ಸಭೆ ನಡೆಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಕೌಶಲಾಭಿವೃದ್ಧಿ ನಿಗಮದ ನಿಧಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪದಲ್ಲಿ ಬಂಧಿತರಾಗಿರುವ ಚಂದ್ರಬಾಬು ನಾಯ್ಡು ಸದ್ಯ ರಾಜಮುಂಡ್ರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಪಕ್ಷದ ನಾಯಕತ್ವವು ತೆಲಂಗಾಣದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ತೆಲಂಗಾಣದ ಪಕ್ಷದ ಮುಖ್ಯಸ್ಥರು ಈ ಪರಿಸ್ಥಿತಿಯನ್ನು ಕಾರ್ಯಕರ್ತರಿಗೆ ವಿವರಿಸಬೇಕು ಎಂದು ಚಂದ್ರಬಾಬು ನಾಯ್ಡು ಅವರು ತೆಲಂಗಾಣ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಕಸನಿ ಜ್ಞಾನೇಶ್ವರ್ ಅವರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
2014ರ ಚುನಾವಣೆಯಲ್ಲಿ 15 ಸ್ಥಾನಗಳು ಹಾಗೂ 2018ರ ಚುನಾವಣೆಯಲ್ಲಿ ಎರಡು ಸ್ಥಾನಗಳಲ್ಲಿ ಜಯಿಸಿದ್ದ ತೆಲುಗು ದೇಶಂ ಪಕ್ಷಕ್ಕೆ ತೆಲಂಗಾಣದಲ್ಲಿ ಗಮನಾರ್ಹ ಬೆಂಬಲದ ನೆಲೆಯಿದೆ. ಹೀಗಿದ್ದೂ ತೆಲುಗು ದೇಶಂ ಪಕ್ಷದಿಂದ ಆಯ್ಕೆಯಾಗಿದ್ದ ಶಾಸಕರು ನಂತರದಲ್ಲಿ ಆಡಳಿತಾರೂಢ ಬಿ ಆರ್ ಎಸ್ ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ಬದಲಿಸಿದ್ದರು.
2018ರಲ್ಲಿ ನಡೆದಿದ್ದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿ ಆರ್ ಎಸ್ (ಈ ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ) ಪಕ್ಷವು 119 ಸ್ಥಾನಗಳ ಪೈಕಿ 88 ಸ್ಥಾನಗಳಲ್ಲಿ ಸರಾಸರಿ ಶೇ. 47.4 ಮತ ಗಳಿಕೆಯೊಂದಿಗೆ ಗೆಲುವು ಸಾಧಿಸಿತ್ತು. ನಂತರದ ಸ್ಥಾನದಲ್ಲಿದ್ದ ಕಾಂಗ್ರೆಸ್ ಪಕ್ಷವು ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ಘೋಷಣೆಯಾಗಲಿದೆ.