ಸ್ಪೀಕರ್ ಹುದ್ದೆ ಹಾಗೂ ಐದು ಸಂಪುಟ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟ ಟಿಡಿಪಿ: ವರದಿ

Update: 2024-06-06 05:38 GMT

ನರೇಂದ್ರ ಮೋದಿ , ಚಂದ್ರಬಾಬು ನಾಯ್ಡು , ನಿತೀಶ್ ಕುಮಾರ್ |  PC : PTI 

ವಿಜಯವಾಡ: ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷವು ಸ್ಪೀಕರ್ ಹುದ್ದೆ ಹಾಗೂ ಐದು ಸಚಿವ ಸಂಪುಟ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ ಎಂದು newindianxpress.com ವರದಿ ಮಾಡಿದೆ.

ಇಂಡಿಯಾ ಮೈತ್ರಿಕೂಟದ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ವದಂತಿಗಳನ್ನು ನಿರಾಕರಿಸಿದ ಚಂದ್ರಬಾಬು ನಾಯ್ಡು, ಬುಧವಾರ ಹೊಸದಿಲ್ಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಕ್ಕವೇ ಆಸೀನರಾಗಿ ಗಮನ ಸೆಳೆದಿದ್ದರು. ಎನ್‌ಡಿಎ ಮೈತ್ರಿಕೂಟದ ಎರಡನೆ ಅತಿ ದೊಡ್ಡ ಮೈತ್ರಿ ಪಕ್ಷವಾಗಿ ಉದ್ಭವಿಸಿರುವ ಟಿಡಿಪಿಯ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಾಗೂ ಜೆಡಿಯುನ ನಿತೀಶ್ ಕುಮಾರ್, ಮೂರನೆ ಅವಧಿಯ ಎನ್‌ಡಿಎ ಸರಕಾರ ರಚನೆಯಲ್ಲಿ ಕಿಂಗ್ ಮೇಕರ್ ಪಾತ್ರ ನಿರ್ವಹಿಸಿದ್ದಾರೆ.

ಟಿಡಿಪಿಯು ಲೋಕಸಭಾ ಸ್ಪೀಕರ್ ಹುದ್ದೆಯ ಬಗ್ಗೆ ಹೆಚ್ಚು ಒಲವು ಹೊಂದಿದೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಅತಂತ್ರ ಲೋಕಸಭೆ ಏರ್ಪಟ್ಟಾಗ ಲೋಕಸಭಾ ಸ್ಪೀಕರ್‌ಗೆ ಪರಮಾಧಿಕಾರ ಹಾಗೂ ಪ್ರವೇಶ ದತ್ತವಾಗುವುದರಿಂದ ಅದಕ್ಕಾಗಿ ಪಟ್ಟು ಹಿಡಿದಿದೆ ಎಂದು ಹೇಳಲಾಗಿದೆ. 1998ರಿಂದ 2002ರವರೆಗೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರವಿದ್ದಾಗಲೂ ಕೂಡಾ ಟಿಡಿಪಿಯ ದಿ. ಜಿ.ಎಂ.ಸಿ.ಬಾಲಯೋಗಿ ಲೋಕಸಭಾ ಸ್ಪೀಕರ್ ಆಗಿದ್ದರು.

ಟಿಡಿಪಿಯು ಗ್ರಾಮೀಣಾಭಿವೃದ್ಧಿ, ವಸತಿ, ನಗರಾಭಿವೃದ್ಧಿ ವ್ಯವಹಾರಗಳು, ಬಂದರು ಹಾಗೂ ಸಾಗಣೆ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಗಾಗಿ ಬೇಡಿಕೆ ಇಟ್ಟಿದೆ ಎಂದು ಟಿಡಿಪಿ ಸಂಸದರೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ, ಆಂಧ್ರಪ್ರದೇಶ ತೀವ್ರ ಹಣದ ಮುಗ್ಗಟ್ಟು ಎದುರಿಸುತ್ತಿರುವುದರಿಂದ, ಹಣಕಾಸು ರಾಜ್ಯ ಸಚಿವ ಖಾತೆಗೂ ಬೇಡಿಕೆ ಇರಿಸಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News