ಈಡಿ ವಿಚಾರಣೆ ಎದುರಿಸುತ್ತಿರುವ ಉದ್ಧವ್ ಠಾಕ್ರೆ ಆಪ್ತ, ಶಾಸಕ ರವೀಂದ್ರ ವೇಕರ್ ಶಿಂಧೆ ಬಣಕ್ಕೆ ಸೇರ್ಪಡೆ
ಮುಂಬೈ: ಸಾರ್ವಜನಿಕ ಸ್ಥಳದಲ್ಲಿ ಹೋಟೆಲ್ ನಿರ್ಮಿಸಿದ ಆರೋಪದಲ್ಲಿ ಕಾನೂನು ಜಾರಿ ನಿರ್ದೇಶನಾಲಯ(ಈಡಿ)ದಿಂದ ವಿಚಾರಣೆ ಎದುರಿಸುತ್ತಿರುವ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಶಾಸಕ ರವೀಂದ್ರ ವೇಕರ್ವಾ ರವಿವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಆಪ್ತರಾಗಿದ್ದ ರವೀಂದ್ರ, ಮುಂಬೈ ಜೋಗೇಶ್ವರಿ ಪೂರ್ವ ಕ್ಷೇತ್ರದ ಶಾಸಕ. ಅವರು ಮುಂಬೈ ವಾಯವ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಒಂದು ದಿನ ಹಿಂದಷ್ಟೇ ನಡೆದ ಸಭೆಯಲ್ಲಿ ಠಾಕ್ರೆಯವರೊಂದಿಗೆ ಪಾಲ್ಗೊಂಡಿದ್ದರು.
ಮಲಬಾರ್ ಹಿಲ್‍ನಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ವರ್ಷಾದಲ್ಲಿ ಶಿವಸೇನೆಗೆ ರವೀಂದ್ರ ಸೇರ್ಪಡೆಯಾದರು. "ಶಿವಸೇನೆಯೊಂದಿಗೆ 50 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಶಿಂಧೆ ಬಣ ಸೇರಿದ್ದೇನೆ" ಎಂದು ರವೀಂದ್ರ ಹೇಳಿದರು.
ಜೋಗೇಶ್ವರಿ ಹಾಗೂ ವಿಖ್ರೋಲಿ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕ್ರೀಡೆ ಮತ್ತು ಮನೋರಂಜನಾ ಉದ್ದೇಶಕ್ಕೆ ಮೀಸಲಿರಿಸಿದ್ದ ಜಾಗದಲ್ಲಿ ಐಷಾರಾಮಿ ಹೋಟೆಲ್ ನಿರ್ಮಿಸಿದ ಆರೋಪ ರವೀಂದ್ರ ಅವರ ಮೇಲಿತ್ತು. ಈ ಸಂಬಂಧ ಇ.ಡಿ. ವಿಚಾರಣೆ ನಡೆಸುತ್ತಿದೆ.