ಚಂದ್ರಯಾನ-3ರ ಯಶಸ್ಸಿಗೆ ಶ್ರಮಿಸಿದಾತನಿಗೆ ತಳ್ಳುವ ಗಾಡಿಯಲ್ಲಿ ಇಡ್ಲಿ ಮಾರುವ ಸ್ಥಿತಿ!

Update: 2023-09-19 12:20 GMT

Photo : facebook.deepak.uprariya

ಜಾರ್ಖಂಡ್: ಚಂದ್ರಯಾನ-3ರ ಯಶಸ್ಸು ಭಾರತಕ್ಕೆ ಐತಿಹಾಸಿಕ ಮನ್ನಣೆಯನ್ನು ತಂದುಕೊಟ್ಟಿದೆ. ಬಾಹ್ಯಾಕಾಶ ಲೋಕದಲ್ಲಿ ಇದು ಮಹತ್ತರ ಸಾಧನೆ. ಚಂದ್ರಯಾನ -3 ಯಶಸ್ಸಿನಲ್ಲಿ ಪಾಲುದಾರನಾದ ಎಲೆಕ್ಟ್ರಿಷನ್ ಒಬ್ಬನ ಬದುಕು ಇಂದು ಬೀದಿಗೆ ಬಂದಿದೆ. ತಳ್ಳುವ ಗಾಡಿಯಲ್ಲಿ ಇಡ್ಲಿ ಮಾರುವಂಥ ಪರಿಸ್ಥಿತಿಗೆ ಬಂದು ನಿಂತಿದೆ ಎಂದು ಬಿಬಿಸಿ ವರದಿ ಮಾಡಿದೆ.

ಇಸ್ರೋ ಚಂದ್ರಯಾನ-3 ಯಶಸ್ಸಿನಲ್ಲಿ ತಂತ್ರಜ್ಞನಾಗಿ ಕೆಲಸ ಮಾಡಿದ್ದ ಮಧ್ಯಪ್ರದೇಶದ ದೀಪಕ್ ಕುಮಾರ್ ಉಪ್ರಾರಿಯಾ ಅವರು, ಜೀವನ ಸಾಗಿಸಲು ರಸ್ತೆಬದಿಯಲ್ಲಿ ಇಡ್ಲಿ ಮಾರುತ್ತಿದ್ದಾರೆ.

ಸರ್ಕಾರಿ ಕಂಪೆನಿಯಾದ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಇಸ್ರೋದ ಚಂದ್ರಯಾನ-3 ಯ ಉಡಾವಣಾ ಪ್ಯಾಡ್ ನಿರ್ಮಿಸಿದೆ. ಈ ಲಾಂಚ್ ಪ್ಯಾಡ್ ನಿರ್ಮಿಸಲು ಸುಮಾರು 2,800 ಟೆಕ್ನೀಶಿಯನ್ ಗಳು ಹಗಲಿರುಳು ಶ್ರಮಿಸಿದ್ದಾರೆ. ಇದರಲ್ಲಿ ದೀಪಕ್ ಕುಮಾರ್ ಅವರು ಕೂಡ ಒಬ್ಬರು. 2012ರಲ್ಲಿ ಖಾಸಗಿ ಕಂಪನಿಯೊಂದರ ಕೆಲಸ ಬಿಟ್ಟು ರೂ.8,000 ಸಂಬಳಕ್ಕಾಗಿ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಸೇರಿದ್ದರು. ಸರ್ಕಾರಿ ಕಂಪನಿಯಾದ ಕಾರಣ ಊದ್ಯೋಗ ಭದ್ರತೆಯಿದೆ ಎಂಬ ಕಾರಣಕ್ಕೆ ಅವರು ಈ ಕಂಪೆನಿಗೆ ಸೇರಿದ್ದರು.

ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಲ್ಯಾಂಡ್ ಆಗುವ ಮೂಲಕ ಯಶಸ್ಸಾಗಿತ್ತು. ಈ ಸಾಧನೆಯನ್ನು ಮಾಡಿದ ವಿಶ್ವದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. ಈ ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ದಿಗ್ಗಜರೆಲ್ಲರೂ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದರು. ಅದೇ ಸಂಧರ್ಭ ಇನ್ನೊಂದೆಡೆ ಎಚ್ಇಸಿಯ ನೌಕರರು ತಮ್ಮ 18 ತಿಂಗಳ ಬಾಕಿ ವೇತನಕ್ಕಾಗಿ ಪ್ರತಿಭಟಿಸುತ್ತಿದ್ದರು!

ಈಗ ಉಪ್ರಾರಿಯಾ ಅವರು ರಾಂಚಿಯ ಹಳೆಯ ವಿಧಾನ ಸಭೆ ಎದುರು ಇಡ್ಲಿ ಅಂಗಡಿ ತೆರೆದಿದ್ದಾರೆ.

“ಕಳೆದ ಕೆಲವು ದಿನಗಳಿಂದ ಇಡ್ಲಿಗಳನ್ನು ಮಾರುತ್ತಿದ್ದೇನೆ. ನಾನು ಆಫೀಸ್ ಕೆಲಸದೊಂದಿಗೆ ಈ ಕೆಲಸವನ್ನೂ ಮಾಡುತ್ತಿದ್ದೇನೆ. ಬೆಳಗ್ಗೆ ಇಡ್ಲಿ ಮಾರುತ್ತೇನೆ. ಮಧ್ಯಾಹ್ನ ಆಫೀಸ್ ಕೆಲಸಕ್ಕೆ ಹೋಗುತ್ತೇನೆ. ಸಂಜೆ ಮನೆಗೆ ಹೋಗುವ ಮುನ್ನ ಮತ್ತೆ ಇಡ್ಲಿ ಮಾರುತ್ತೇನೆ”ಎಂದು ಹೇಳುತ್ತಾರೆ.

“ಮೊದಲಿಗೆ ನಾನು ಕ್ರೆಡಿಟ್ ಕಾರ್ಡ್ನೊಂದಿಗೆ ನನ್ನ ಮನೆಯ ಖರ್ಚು ನಿರ್ವಹಿಸಿದೆ. ಆ ಬಳಿಕ ಸಂಬಂಧಿಕರಿಂದ ಸಾಲ ಪಡೆದೆ. ಇಲ್ಲಿಯವರೆಗೆ ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಯಾರಿಗೂ ಹಣ ಹಿಂತಿರುಗಿಸದ ಕಾರಣ ಈಗ ಜನ ಸಾಲ ಕೊಡುವುದನ್ನು ನಿಲ್ಲಿಸಿದ್ದಾರೆ. ನಂತರ ಪತ್ನಿಯ ಒಡವೆಗಳನ್ನು ಅಡವಿಟ್ಟು ಬರಬೇಕಾಗಿದ್ದ ಸಂಬಳ ಕಾಯುತ್ತಾ ದಿನ ದೂಡುತ್ತಿದ್ದೇನೆ” ಎಂದು, ಪಾವತಿಯಾಗದ ಸಂಬಳದ ಕುರಿತು ಹೇಳುತ್ತಾರೆ.

“ನನ್ನ ಹೆಂಡತಿ ಒಳ್ಳೆಯ ಇಡ್ಲಿಗಳನ್ನು ಮಾಡುತ್ತಾಳೆ. ಅವುಗಳನ್ನು ಮಾರಾಟ ಮಾಡುವುದರಿಂದ ನನಗೆ ಪ್ರತಿದಿನ 300 ರಿಂದ 400 ರೂ. ವ್ಯಾಪಾರವಾಗುತ್ತದೆ. ಇದರಿಂದ 50-100 ರೂಪಾಯಿ ಲಾಭ ಗಳಿಸುತ್ತೇನೆ. ಈ ಹಣದಲ್ಲಿ ನಾನು ನನ್ನ ಮನೆಯ ಖರ್ಚು ನಿಭಾಯಿಸುತ್ತಿದ್ದೇನೆ” ಎಂದು ಅವರು ಹೇಳಿದರು.

“ನನಗೆ ಇಬ್ಬರು ಹೆಣ್ಣುಮಕ್ಕಳು. ಅವರು ಶಾಲೆಗೆ ಹೋಗುತ್ತಾರೆ. ಈ ವರ್ಷ ನಾನು ಅವರ ಶಾಲಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಶಾಲೆಯಿಂದ ಪ್ರತಿದಿನ ನೋಟಿಸ್ ಬರುತ್ತಲೇ ಇದೆ. ತರಗತಿಯಲ್ಲಿಯೂ ಶಿಕ್ಷಕರು ಎಚ್ಇಸಿಯಯಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳು ಯಾರು ಎಂದು ಕೇಳಿ, ಎದ್ದು ನಿಲ್ಲಲು ಹೇಳುತ್ತಾರೆ. ಇದರಿಂದ ನನ್ನ ಮಕ್ಕಳಿಗೂ ಅವಮಾನವಾಗುತ್ತಿದೆ. ಅವರು ಅಳುತ್ತಾ ಮನೆಗೆ ಬರುತ್ತಾರೆ. ಅವರು ಅಳುವುದನ್ನು ನೋಡಿ ನನ್ನ ಕಣ್ಣಂಚು ಭಾರವಾಗುತ್ತದೆ. ಮಕ್ಕಳ ಮುಂದೆ ನಾನು ಅಳುವುದಿಲ್ಲ. ನೋವು ನುಂಗಿಕೊಂಡೇ ದಿನ ದೂಡುತ್ತಿದ್ದೇನೆ “ ಎಂದು ತಮ್ಮ ಅಳಲು ತೋಡಿಕೊಂಡರು.



Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News