ಹಾನಿಗೊಳಗಾಗಿದ್ದ ಮೊಬೈಲ್ ಫೋನ್ ರಿಪೇರಿಗೆ ಹಣಕ್ಕೆ ಒತ್ತಾಯಿಸಿದ ಸ್ನೇಹಿತನನ್ನು ಹತ್ಯೆಗೈದ ಅಪ್ರಾಪ್ತ ಬಾಲಕ!
ವಲ್ಸದ್ (ಗುಜರಾತ್) : ತನ್ನಿಂದ ಹಾನಿಗೊಳಗಾಗಿದ್ದ ಮೊಬೈಲ್ ಫೋನ್ ರಿಪೇರಿಗಾಗಿ ಹಣಕ್ಕೆ ಒತ್ತಾಯಿಸಿದ ಸ್ನೇಹಿತನನ್ನು ಹತ್ಯೆಗೈದ ಆರೋಪದ ಮೇಲೆ ಅಪ್ರಾಪ್ತ ಬಾಲಕನೊಬ್ಬನನ್ನು ಗುಜರಾತ್ ನ ವಲ್ಸದ್ ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಆರೋಪಿಯು 16 ವರ್ಷದ ಮೃತ ಬಾಲಕನನ್ನು ವಲ್ಸದ್ ಜಿಲ್ಲೆಯ ಪಾರ್ದಿ ಪಟ್ಟಣದಲ್ಲಿನ ನಿರ್ಜನ ಕಟ್ಟಡವೊಂದಕ್ಕೆ ಕರದೊಯ್ದಿದ್ದು, ಲಿಫ್ಟ್ ನ ಹಿಡಿಕೆಯೊಳಕ್ಕೆ ತಳ್ಳಿದ್ದಾನೆ. ಇದರಿಂದ ಬಾಲಕನು ಗಂಭೀರವಾಗಿ ಗಾಯಗೊಂಡಿದ್ದಾನೆ. ನಂತರ, ಆರೋಪಿಯು ಬಾಲಕನ ತಲೆಯನ್ನು ಇಟ್ಟಿಗೆಯಿಂದ ಜಜ್ಜಿದ್ದು, ಆತನ ಮೃತ ದೇಹವನ್ನು ಇಟ್ಟಿಗೆ ಹಾಗೂ ಪೊದೆಗಳೊಳಗೆ ಅಡಗಿಸಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನವೆಂಬರ್ 27ರಂದು ಮನೆಯಿಂದ ತೆರಳಿದ್ದ ನನ್ನ ಪುತ್ರ, ಎರಡು ದಿನಗಳಾದರೂ ಮನೆಗೆ ಮರಳಿಲ್ಲ ಎಂದು ಮೃತ ಬಾಲಕನ ತಂದೆ ದೂರು ದಾಖಲಿಸಿದ್ದರು.
“ಅದೇ ದಿನ ಪಾರ್ದಿ ಐಟಿಐ ಹಿಂಬದಿಯ ಕೈಗಾರಿಕಾ ಪ್ರದೇಶವೊಂದರಲ್ಲಿನ ಅಪೂರ್ಣ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಲಿಫ್ಟ್ ಹಿಡಿಕೆಯಲ್ಲಿ 16 ವರ್ಷದ ಬಾಲಕನ ಮೃತ ದೇಹ ಪತ್ತೆಯಾಗಿತ್ತು” ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ, ತನಿಖೆಯನ್ನು ಕೈಗೆತ್ತಿಕೊಂಡ ಜಿಲ್ಲಾ ಅಪರಾಧ ವಿಭಾಗ ಹಾಗೂ ವಿಶೇಷ ಕಾರ್ಯಾಚರಣೆ ಗುಂಪು, ಸುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಮೃತ ಬಾಲಕನ ಅಪ್ರಾಪ್ತ ಸ್ನೇಹಿತನನ್ನು ವಶಕ್ಕೆ ಪಡೆದಿದೆ.
ಕೆಲ ದಿನಗಳ ಹಿಂದೆ ನಾನು ಒಡೆದು ಹಾಕಿದ್ದ ಮೊಬೈಲ್ ಫೋನ್ ರಿಪೇರಿಗಾಗಿ ನನ್ನ ಸ್ನೇಹಿತ ಪದೇ ಪದೇ ಹಣಕ್ಕೆ ಒತ್ತಾಯಿಸುತ್ತಿದ್ದುದರಿಂದ ನಾನು ಆತನನ್ನು ಹತ್ಯೆಗೈದೆ ಎಂದು ಶಂಕಿತ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಹಣ ನೀಡುವ ಸೋಗಿನಲ್ಲಿ ಮೃತ ಬಾಲಕನನ್ನು ಕಟ್ಟಡಕ್ಕೆ ಕರೆಸಿಕೊಂಡಿದ್ದ ಆರೋಪಿಯು, ಆತನನ್ನು ಲಿಫ್ಟ್ ನ ಹಿಡಿಕೆಯೊಳಕ್ಕೆ ತಳ್ಳಿದ್ದಾನೆ ಎಂದು ಆರೋಪಿಸಲಾಗಿದೆ.
“ಆತ ಗಾಯಗೊಂಡಿದ್ದ ಬಾಲಕನ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ಹತ್ಯೆಗೈದಿದ್ದಾನೆ. ನಂತರ, ಆತನ ಮೃತ ದೇಹವನ್ನು ಇಟ್ಟಿಗೆಗಳ ತುಂಡು ಹಾಗೂ ಪೊದೆಗಳೊಳಗೆ ಅಡಗಿಸಿಟ್ಟು, ಅಲ್ಲಿಂದ ಪರಾರಿಯಾಗಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬಾಲಕನ ತಪ್ಪೊಪ್ಪಿಗೆಯ ನಂತರ, ಕಾನೂನು ಕ್ರಮ ಕೈಗೊಂಡಿರುವ ಪೊಲೀಸರು, ತನಿಖೆಗೆ ಚಾಲನೆ ನೀಡಿದ್ದಾರೆ.