ಭಯೋತ್ಪಾದನೆ ಹಿನ್ನೆಲೆ | ಭಾರತ-ಪಾಕ್ ಗಡಿಯ ಸಮೀಪ ಪ್ರಯಾಣಿಸದಂತೆ ತನ್ನ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ

Update: 2025-03-09 21:09 IST
India-Pakistan border

ಸಾಂದರ್ಭಿಕ ಚಿತ್ರ | PC : PTI 

  • whatsapp icon

ಹೊಸದಿಲ್ಲಿ: ಭಯೋತ್ಪಾದನೆ ಮತ್ತು ಸಶಸ್ತ್ರ ಸಂಘರ್ಷದ ಸಾಧ್ಯತೆಯ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ಗಡಿ ಮತ್ತು ನಿಯಂತ್ರಣ ರೇಖೆ(ಎಲ್‌ಒಸಿ)ಯ ಸಮೀಪ ಪ್ರಯಾಣಿಸದಂತೆ ಅಮೆರಿಕವು ತನ್ನ ಪ್ರಜೆಗಳಿಗೆ ಶುಕ್ರವಾರ ಎಚ್ಚರಿಕೆಯನ್ನು ಹೊರಡಿಸಿದೆ. ಬಲೂಚಿಸ್ತಾನ್ ಮತ್ತು ಖೈಬರ್ ಫಖ್ತುಂಖ್ವಾ ಪ್ರಾಂತ್ಯಗಳಿಗೂ ಭೇಟಿ ನೀಡದಂತೆ ಅದು ತನ್ನ ಪ್ರಯಾಣ ಸಲಹಾ ಸೂಚಿಯಲ್ಲಿ ಎಚ್ಚರಿಕೆಯನ್ನು ನೀಡಿದೆ.

ಭಯೋತ್ಪಾದನೆ ಮತ್ತು ಸಶಸ್ತ್ರ ಸಂಘರ್ಷದ ಸಾಧ್ಯತೆ ಇರುವುದರಿಂದ ಪಾಕಿಸ್ತಾನಕ್ಕೆ ಪ್ರಯಾಣಿಸುವುದನ್ನು ಮರುಪರಿಶೀಲಿಸುವಂತೆ ಅಮೆರಿಕ ವಿದೇಶಾಂಗ ಇಲಾಖೆಯು ತನ್ನ ಪ್ರಜೆಗಳಿಗೆ ಸೂಚಿಸಿದೆ.

ನಿಯಂತ್ರಣ ರೇಖೆಯುದ್ದಕ್ಕೂ ಇರುವ ಪ್ರದೇಶಗಳು ಸೇರಿದಂತೆ ಯಾವುದೇ ಕಾರಣಕ್ಕೂ ಭಾರತ-ಪಾಕಿಸ್ತಾನ ಗಡಿಗೆ ಪ್ರಯಾಣಿಸಬೇಡಿ. ಆ ಪ್ರದೇಶಗಳಲ್ಲಿ ಉಗ್ರಗಾಮಿ ಗುಂಪುಗಳು ಸಕ್ರಿಯವಾಗಿವೆ. ಭಾರತ ಮತ್ತು ಪಾಕಿಸ್ತಾನ ಗಡಿಯ ಇಕ್ಕೆಲಗಳ ತಮ್ಮ ಪ್ರದೇಶಗಳಲ್ಲಿ ಬಲವಾದ ಸೇನಾ ಉಪಸ್ಥಿತಿಯನ್ನು ಕಾಯ್ದುಕೊಂಡಿವೆ ಎಂದು ಸಲಹಾ ಸೂಚಿಯಲ್ಲಿ ತಿಳಿಸಲಾಗಿದೆ.

ಭದ್ರತಾ ಬೆದರಿಕೆಗಳಿಂದಾಗಿ ಹಿಂದಿನ ಒಕ್ಕೂಟ ಆಡಳಿತದ ಬುಡಕಟ್ಟು ಪ್ರದೇಶಗಳು ಸೇರಿದಂತೆ ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾಗೆ ಭೇಟಿ ನೀಡದಂತೆ ಅಮೆರಿಕದ ಪ್ರಜೆಗಳಿಗೆ ಎಚ್ಚರಿಕೆ ನೀಡಲಾಗಿದೆ.

ಹಿಂಸಾತ್ಮಕ ಉಗ್ರಗಾಮಿ ಗುಂಪುಗಳು ಪಾಕಿಸ್ಥಾನದಲ್ಲಿ ದಾಳಿ ಸಂಚುಗಳನ್ನು ಮುಂದುವರಿಸಿವೆ. ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾಗಳಲ್ಲಿ ಆಗಾಗ್ಗೆ ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ. ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಗಳು ಹಲವಾರು ಸಾವುನೋವುಗಳಿಗೆ ಕಾರಣವಾಗಿವೆ ಮತ್ತು ಸಣ್ಣ ಪ್ರಮಾಣದ ದಾಳಿಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ ಎಂದು ಸಲಹಾ ಸೂಚಿಯು ಎತ್ತಿ ತೋರಿಸಿದೆ.

ಭಯೋತ್ಪಾದನೆ ಮತ್ತು ಉಗ್ರಗಾಮಿಗಳಿಂದ ನಡೆಯುತ್ತಿರುವ ಹಿಂಸಾಚಾರ ನಾಗರಿಕರು, ಸ್ಥಳೀಯ ಮಿಲಿಟರಿ ಮತ್ತು ಪೋಲಿಸರ ಮೇಲೆ ವಿವೇಚನಾರಹಿತ ದಾಳಿಗಳಿಗೆ ಕಾರಣವಾಗಿವೆ. ಭಯೋತ್ಪಾದಕರು ಯಾವುದೇ ಎಚ್ಚರಿಕೆ ನೀಡದೆ ಸಾರಿಗೆ ಕೇಂದ್ರಗಳು, ಮಾರುಕಟ್ಟೆಗಳು, ಶಾಪಿಂಗ್ ಮಾಲ್‌ಗಳು, ಮಿಲಿಟರಿ ಸ್ಥಾವರಗಳು, ವಿಮಾನ ನಿಲ್ದಾಣಗಳು, ಪ್ರವಾಸಿ ತಾಣಗಳು, ಶಾಲೆಗಳು, ಆಸ್ಪತ್ರೆಗಳು, ಆರಾಧನಾ ಸ್ಥಳಗಳು ಮತ್ತು ಸರಕಾರಿ ಕಚೇರಿಗಳ ಮೇಲೆ ದಾಳಿಗಳ್ನು ನಡೆಸಬಹುದು. ಭಯೋತ್ಪಾದಕರು ಈ ಹಿಂದೆ ಅಮೆರಿಕದ ರಾಜತಾಂತ್ರಿಕರು ಮತ್ತು ರಾಜತಾಂತ್ರಿಕ ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಿದ್ದಾರೆ ಎಂದು ಸಲಹಾ ಸೂಚಿಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News