ಆ. 12, 13: ವಯನಾಡ್ ಗೆ ರಾಹುಲ್ ಗಾಂಧಿ ಭೇಟಿ
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಸ್ಟ್ 12 ಮತ್ತು 13ರಂದು ತನ್ನ ಲೋಕಸಭಾ ಕ್ಷೇತ್ರ ವಯನಾಡ್ ಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ತನ್ನ ಸಂಸತ್ ಸದಸ್ಯತ್ವ ಮೇಲಿನ ನಿಷೇಧ ರದ್ದುಗೊಂಡ ಬಳಿಕ ಅವರು ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
‘ಮೋದಿ’ ಉಪನಾಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಘೋಷಿಸುವ ವಿಚಾರಣಾ ನ್ಯಾಯಾಲಯದ ತೀರ್ಪಿಗೆ ಕಳೆದ ವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಬಳಿಕ, ಸೋಮವಾರ ಅವರ ಸಂಸತ್ ಸದಸ್ಯತ್ವವನ್ನು ಮರಳಿಸಲಾಗಿತ್ತು. ವಿಚಾರಣಾ ನ್ಯಾಯಾಲಯದ ತೀರ್ಪಿನ ಬಳಿಕ ಮಾರ್ಚ್ ನಲ್ಲಿ ಅವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಲಾಗಿತ್ತು.
‘‘ಆಗಸ್ಟ್ 12 ಮತ್ತು 13ರಂದು ರಾಹುಲ್ ಗಾಂಧಿ ತನ್ನ ಕ್ಷೇತ್ರ ವಯನಾಡ್ನಲ್ಲಿರುತ್ತಾರೆ. ಪ್ರಜಾಪ್ರಭುತ್ವಕ್ಕೆ ಲಭಿಸಿದ ವಿಜಯದ ಬಳಿಕ, ವಯನಾಡ್ನ ಜನತೆ ಸಂಭ್ರಮಿಸಿದ್ದಾರೆ. ಈಗ ಸಂಸತ್ ನಲ್ಲಿ ಅವರ ಧ್ವನಿ ಮರಳಿದೆ, ರಾಹುಲ್ ಜಿ ಕೇವಲ ಓರ್ವ ಸಂಸದನಲ್ಲ, ಅವರ ಕುಟುಂಬ ಸದಸ್ಯರೂ ಆಗಿದ್ದಾರೆ’’ ಎಂದು ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಟ್ವಿಟರ್ ನಲ್ಲಿ ಬರೆದಿದ್ದಾರೆ.