ʼಚಂದ್ರಯಾನದಿಂದ ಬಂದ ಮೊದಲ ದೃಶ್ಯʼ ಎಂದು ಹಂಚಿಕೊಂಡಿದ್ದ ಟ್ವೀಟ್‌ ವಿವಾದವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ನಟ

Update: 2023-08-21 18:21 GMT

 ಪ್ರಕಾಶ್‌ ರಾಜ್‌ | Photo : PTI 

ಹೊಸದಿಲ್ಲಿ: ಚಂದ್ರನ ಮೇಲೆ ಕಾಲಿಟ್ಟಾಗ ಅಲ್ಲೂ ಓರ್ವ ಮಲಯಾಳಿ ಚಾ ಅಂಗಡಿ ಇಟ್ಟಿರುತ್ತಾರೆ ಎನ್ನುವ ಅರ್ಥದ ಜೋಕ್‌ ಅನ್ನು ಹಂಚಿಕೊಂಡಿರುವ ನಟ ಪ್ರಕಾಶ್‌ ರಾಜ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಇಸ್ರೋದ ಚಂದ್ರಯಾನ-3ಯನ್ನು ಪ್ರಕಾಶ್‌ ರಾಜ್‌ ತಮಾಷೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್‌ ರಾಜ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ ಚಹಾ ಮಾರಾಟಗಾರನನ್ನು ತೋರಿಸುವ ಮೂಲಕ ಪ್ರಧಾನಿ ಮೋದಿಯನ್ನೇ ಟೀಕಿಸಿದ್ದಾರೆ ಎಂದು ಬಲಪಂಥೀಯರು ಪ್ರಕಾಶ್‌ ರಾಜ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್‌ ರಾಜ್‌, ʼದ್ವೇಷ ದ್ವೇಷವನ್ನು ಮಾತ್ರ ನೋಡುತ್ತದೆ. ಕೇರಳದ ಚಾಯ್‌ವಾಲಾಗಳನ್ನು ಸಂಭ್ರಮಿಸುವ ನಾನು ಆರ್ಮಸ್ಟ್ರಾಂಗ್‌ (ಚಂದಿರನ ಮೇಲೆ ಮೊದಲು ಕಾಲಿಟ್ಟ ಮನುಷ್ಯ) ಕಾಲದ ಜೋಕ್‌ ಅನ್ನು ಉಲ್ಲೇಖಿಸಿದ್ದೆ. ಟ್ರೋಲರ್‌ಗಳು ಯಾವ ಚಾಯ್‌ವಾಲವನ್ನು ಅದರಲ್ಲಿ ಕಂಡಿದ್ದರು? ನಿಮಗೆ ಜೋಕ್‌ ಅನ್ನು ಕಾಣಲು ಸಾಧ್ಯವಾಗದಿದ್ದರೆ, ನೀವೇ ಜೋಕ್‌ ಆಗುತ್ತೀರಿ, ಬೆಳವಣಿಗೆ ಹೊಂದಿರಿʼ ಎಂದು ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದಾರೆ.

ಅದಕ್ಕೂ ಮುನ್ನ, “ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದ್ರಶ್ಯ” ಎಂದು ಚಹಾ ಮಾರುವ ವ್ಯಕ್ತಿಯೊಬ್ಬನ ಕಾರ್ಟೂನ್‌ ಚಿತ್ರವನ್ನು ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News