ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ ಕೇರಳೀಯರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ : ಕೇರಳ ಸರಕಾರ ಘೋಷಣೆ

Update: 2024-06-13 16:08 GMT

ಪಿಣರಾಯಿ ವಿಜಯನ್ |  PTI 

ತಿರುವನಂತಪುರ :ಕುವೈತ್‌ನಲ್ಲಿ ಬುಧವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟ ಕೇರಳೀಯರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಆರ್ಥಿಕ ನೆರವನ್ನು ಒದಗಿಸುವುದಾಗಿ ಕೇರಳ ಸರಕಾರ ಗುರುವಾರ ಘೋಷಿಸಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ನಡೆದ ತುರ್ತು ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತೆಂದು, ಸಿಎಂ ಕಾರ್ಯಾಲಯದ ಹೇಳಿಕೆ ತಿಳಿಸಿದೆ.

ಘಟನೆಯಲ್ಲಿ ಗಾಯಗೊಂಡವರಿಗೆ ಒಂದು ಲಕ್ಷ ರೂ. ನೆರವು ನೀಡಲು ಕೂಡಾ ಸಂಪುಟ ನಿರ್ಧರಿಸಿದೆ. ಅಗ್ನಿ ದುರಂತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಒದಗಿಸುವ ಹಾಗೂ ಮೃತಪಟ್ಟವರ ಪಾರ್ಥಿವ ಶರೀರದ ಅವಶೇಷಗಳನ್ನು ಶೀಘ್ರವೇ ಕೇರಳಕ್ಕೆ ತರುವ ಪ್ರಯತ್ನಗಳಲ್ಲಿ ಸಮನ್ವಯತೆ ಸಾಧಿಸಲು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು ತಕ್ಷಣವೇ ಕುವೈತ್‌ಗೆ ಕಳುಹಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಹೇಳಿಕೆ ತಿಳಿಸಿದೆ.

ಸಚಿವೆಯ ಜೊತೆ ರಾಜ್ಯ ಮಿಶನ್ ನಿರ್ದೇಶಕ (ಎನ್‌ಎಚ್‌ಎಮ್) ಜೀವನ್ ಬಾಬು ಕೂಡಾ ಕುವೈತ್‌ಗೆ ತೆರಳಲಿದ್ದಾರೆ. ದುರಂತದಲ್ಲಿ ಮೃತಪಟ್ಟ ಕೇರಳೀಯರ ಕುಟುಂಬಗಳಿಗೆ ಪ್ರಮುಖ ಉದ್ಯಮಿಗಳಾದ ಎಂ.ಎ.ಯೂಸುಫ್ ಆಲಿ 5 ಲಕ್ಷ ರೂ. ಹಾಗೂ ರವಿ ಪಿಳ್ಳೈ 2 ಲಕ್ಷ ರೂ.ನೆರವು ನೀಡುವುದಾಗಿ ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆಂದು ಹೇಳಿಕೆ ತಿಳಿಸಿದೆ.

ಕುವೈತ್ ಅಗ್ನಿ ಅವಘಡದಲ್ಲಿ ಮೃತಪಟ್ಟವರಿಗೆ ಸಂಪುಟ ಸಭೆಯಲ್ಲಿ ಸಂತಾಪ ಸೂಚಿಸಲಾಯಿತೆಂದು ಹೇಳಿಕೆ ತಿಳಿಸಿದೆ.

ಕುವೈತ್ ನಗರದ ಮಂಗಾಫ್‌ನಲ್ಲಿ ಬುಧವಾರ ಮುಂಜಾನೆ ಏಳು ಅಂತಸ್ತುಗಳ ವಸತಿಕಟ್ಟಡವೊಂದರಲ್ಲಿ ಬುಧವಾರ ಸಂಭವಿಸಿದ ಅಗ್ನಿ ದುರಂತದಲ್ಲಿ 40 ಮಂದಿ ಭಾರತೀಯರು ಸೇರಿದಂತೆ 49 ಮಂದಿ ಸಾವನ್ನಪ್ಪಿದ್ದರು ಹಾಗೂ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News