ಪತ್ನಿಯನ್ನು ತೊರೆದು ಆರೆಸ್ಸೆಸ್ ಕಚೇರಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಗೆ ವಿಚ್ಛೇದನ ನಿರಾಕರಿಸಿದ ಹೈಕೋರ್ಟ್
ಪಾಟ್ನಾ: ಪತ್ನಿ “ಹಿಂಸೆ” ನೀಡುತ್ತಿದ್ದಾಳೆಂದು ಆರೋಪಿಸಿ ಸ್ಥಳೀಯ ಆರೆಸ್ಸೆಸ್ ಕಚೇರಿಯಲ್ಲಿ ವಾಸಿಸುತ್ತಿದ್ದ ಓರ್ವ ವ್ಯಕ್ತಿಗೆ ನಲಂದ ಜಿಲ್ಲೆಯ ಕುಟುಂಬ ನ್ಯಾಯಾಲಯ ವಿಚ್ಛೇದನ ಒದಗಿಸಿದ್ದರೆ ಈ ಆದೇಶವನ್ನು ಪಾಟ್ನಾ ಹೈಕೋರ್ಟ್ ಬದಿಗೆ ಸರಿಸಿದೆ ಎಂದು PTI ವರದಿ ಮಾಡಿದೆ.
ಕುಟುಂಬ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಉದಯ್ ಚಂದ್ ಗುಪ್ತಾ ಎಂಬಾತನ ಪತ್ನಿ ನಿಶಾ ಗುಪ್ತಾ ಮೇಲ್ಮನವಿ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಗಂಡ ತನಗೆ ಹೆಂಡತಿ ಯಾವ ಕಾರಣಕ್ಕಾಗಿ ಹಿಂಸೆ ನೀಡಿದ್ಧಾಳೆ ಎಂದು ಸಾಬೀತು ಪಡಿಸಲು ವಿಫಲವಾಗಿರುವುದರಿಂದ ವಿಚ್ಛೇದನ ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಪಿ ಬಿ ಬಜಂತ್ರಿ ಹಾಗೂ ಜಿತೇಂದ್ರ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ. ದಂಪತಿಗೆ 1987ರಲ್ಲಿ ವಿವಾಹವಾಗಿದ್ದು, ಅವರಿಗೆ ಇಬ್ಬರು ಪುತ್ರರಿದ್ದಾರೆ.
ಈ ಪ್ರಕರಣದಲ್ಲಿ ವೈವಾಹಿಕ ಸಂಬಂಧದಲ್ಲಿ ಹಲವಾರು ಏಳುಬೀಳುಗಳಿರಬಹುದು ಆದರೆ ಪತ್ನಿ ತನ್ನ ಪತಿಗೆ ಹಿಂಸೆ ನೀಡಿದ್ದಾಳೆಂಬುದಕ್ಕೆ ಯಾವುದೇ ಆಧಾರವಿಲ್ಲ ಆದರೆ ಇನ್ನೊಂದು ಕಡೆಯಿಂದ ಹಿಂಸೆ ನಡೆದಿದೆ ಎಂಬಂತೆ ತೋರುತ್ತಿದೆ ಎಂದು ತನ್ನ 47 ಪುಟಗಳ ತೀರ್ಪಿನಲ್ಲಿ ಹೇಳಲಾಗಿದೆ.
ಗಂಡ ಮನೆ ತೊರೆದು ಆರೆಸ್ಸೆಸ್ ಕಚೇರಿಯಲ್ಲಿ ವಾಸವಾಗಿದ್ದರೂ ಹೆಂಡತಿ ಇನ್ನೂ ಗಂಡನ ಮನೆಯಲ್ಲಿಯೇ ತನ್ನ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾಳೆಂಬ ಅಂಶವನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ.