ಒಬಿಸಿ ಸಮುದಾಯಕ್ಕೆ ಮೀಸಲಾಗಿದ್ದ ಭೂಮಿ ಮಹಾರಾಷ್ಟ್ರ ಸಚಿವರ ಟ್ರಸ್ಟ್‌ಗೆ ಮಂಜೂರು
ಮುಂಬೈ: ಒಬಿಸಿಗಳ ಗುಂಪಿನಲ್ಲಿರುವ ಬಂಜಾರಾ ಜನರಿಗಾಗಿ ಸಮುದಾಯ ಕೇಂದ್ರದ ನಿರ್ಮಾಣಕ್ಕಾಗಿ ನಗರ ಯೋಜನಾ ಸಂಸ್ಥೆ ಸಿಡ್ಕೋ ಹಂಚಿಕೆ ಮಾಡಿದ್ದ ನಿವೇಶನವನ್ನು ಮಹಾರಾಷ್ಟ್ರದ ಏಕನಾಥ ಶಿಂಧೆ ಸಂಪುಟದಲ್ಲಿ ಸಚಿವರಾಗಿರುವ ಸಂಜಯ್ ರಾಠೋಡ್ (ಶಿವಸೇನೆ) ಅವರು ತನ್ನ ನೇತೃತ್ವದ ಟ್ರಸ್ಟ್‌ಗೆ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು indianexpress.com ವರದಿಯಾಗಿದೆ.
ಬಂಜಾರಾ ಸಮುದಾಯವನ್ನು ಪ್ರತಿನಿಧಿಸುವ ಅಖಿಲ ಭಾರತ ಬಂಜಾರಾ ಸೇವಾ ಸಂಘ (ಎಐಬಿಎಸ್‌ಎಸ್)ವು ನವಂಬರ್ 2022ರಲ್ಲಿ ಪ್ರಪ್ರಥಮವಾಗಿ ಸಮುದಾಯ ಕೇಂದ್ರಕ್ಕಾಗಿ ಸರಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿತ್ತು. ಒಂದು ವರ್ಷದ ಬಳಿಕ ನವಂಬರ್ 2023ರಲ್ಲಿ ಸರಕಾರವು ಆಹಾರ ಮತ್ತು ಔಷಧಿ ನಿಯಂತ್ರಣ ಸಚಿವ ರಾಠೋಡ್ ನೇತೃತ್ವದ ಶ್ರೀ ಸಂತ ಡಾ.ರಾಮರಾವ ಮಹಾರಾಜ ಚಾರಿಟೇಬಲ್ ಟ್ರಸ್ಟ್‌ಗೆ 5,600 ಚ.ಮೀ.ವಿಸ್ತೀರ್ಣದ ನಿವೇಶನವನ್ನು ಮಂಜೂರು ಮಾಡಿತ್ತು. ರಾಠೋಡ್ ಬಂಜಾರಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಟ್ರಸ್ಟ್‌ಗೆ ನಿವೇಶನ ಮಂಜೂರು ಮಾಡಿರುವುದು ಅನೈತಿಕವಾಗಿದೆ ಮತ್ತು ಸಚಿವರಿಂದ ಅಧಿಕಾರ ದುರುಪಯೋಗವನ್ನು ತೋರಿಸುತ್ತಿದೆ ಎಂದು ಬಂಜಾರ ಸಮುದಾಯದ ಕೆಲವು ಸದಸ್ಯರು ಆರೋಪಿಸಿದ್ದಾರೆ. ಬಂಜಾರಾ ಸಮುದಾಯವನ್ನು ಪ್ರತಿನಿಧಿಸುವ ಇನ್ನೊಂದು ಸಂಘಟನೆ ಅಖಿಲ ಭಾರತ ಗೋರಬಂಜಾರಾ ಜಾಗರಣ ಪರಿಷದ್ ರಾಜ್ಯಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ.
‘ಇಡೀ ಪ್ರಕ್ರಿಯೆಯು ಅಧಿಕಾರದ ದುರುಪಯೋಗವಲ್ಲದೆ ಬೇರೇನೂ ಅಲ್ಲ. ನಿವೇಶನ ತನ್ನ ನೇತೃತ್ವದ ಟ್ರಸ್ಟ್‌ಗೇ ಸಿಗುವಂತೆ ಸಚಿವ ರಾಠೋಡ್ ನೋಡಿಕೊಂಡಿದ್ದಾರೆ,ಇದು ಅನೈತಿಕ ಮಾತ್ರವಲ್ಲ,ಅಕ್ರಮವೂ ಆಗಿದೆ. ಈ ಬಗ್ಗೆ ಕೂಲಂಕಶ ತನಿಖೆ ನಡೆಯಬೇಕು,ಹೀಗಾಗಿ ನಾವು ರಾಜ್ಯಪಾಲರು, ಮುಖ್ಯಮಂತ್ರಿಗಳು,ಇಬ್ಬರು ಉಪಮುಖ್ಯಮಂತ್ರಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಅಹವಾಲು ಸಲ್ಲಿಸಿದ್ದೇವೆ. ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪರಿಷದ್‌ನ ಕಾರ್ಯದರ್ಶಿ ವಿಠಲ ದರ್ವೆ ಹೇಳಿದರು.
‘ನಿವೇಶನದಲ್ಲಿ ಯಾವುದೇ ಕಾಮಗಾರಿ ಆರಂಭಿಸಿಲ್ಲ. ಮಾರ್ಗಸೂಚಿಯಂತೆ ಆರು ತಿಂಗಳಲ್ಲಿ ಕೆಲಸ ಆರಂಭಿಸಲು ನಮಗೆ ಸಾಧ್ಯವಾಗಿಲ್ಲ. ಹೀಗಾಗಿ ಯಾವುದೇ ಇತರ ಸಂಘಟನೆ ಈ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬಹುದು ’ಎಂದು ರಾಠೋಡ್ ಸಮಜಾಯಿಷಿ ನೀಡಿದ್ದಾರೆ.
ವಿಶೇಷವೆಂದರೆ ಸಮುದಾಯ ಕೇಂದ್ರಕ್ಕಾಗಿ ಮೊದಲು ಬೇಡಿಕೆ ಸಲ್ಲಿಸಿದ್ದ ಎಐಬಿಎಸ್‌ಎಸ್‌ಗೆ ಬೇರೊಂದು ಟ್ರಸ್ಟ್‌ಗೆ ನಿವೇಶನ ಮಂಜೂರಾಗಿದ್ದು ತಿಳಿದೇ ಇಲ್ಲ.
‘ನಾನು ಸಮುದಾಯ ಕೇಂದ್ರಕ್ಕಾಗಿ ಬೇಡಿಕೆ ಸಲ್ಲಿಸಿದ್ದೆ,ಆದರೆ ಅದು ಯಾವ ಸ್ಥಿತಿಯಲ್ಲಿದೆ ಎನ್ನುವುದು ನನಗೆ ತಿಳಿದಿಲ್ಲ ’ ಎಂದು ಎಐಬಿಎಸ್ ಎಸ್‌ನ ಶಂಕರ ಪವಾರ್ ತಿಳಿಸಿದರು.