'INDIA' ಎಂಬ ಹೆಸರು ಭಾರತದ ಆಶಯವನ್ನು ರಕ್ಷಿಸುವ ನಮ್ಮ ಸಂಕಲ್ಪದ ಸಂಕೇತ: ರಾಹುಲ್‌ ಗಾಂಧಿ

Update: 2023-07-18 12:47 GMT

ರಾಹುಲ್‌ ಗಾಂಧಿ | Photo: PTI

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ INDIA ಮೈತ್ರಿಕೂಟದ ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ “ಈ ಹೋರಾಟವು 2 ರಾಜಕೀಯ ನಿಲುವುಗಳ ನಡುವಿನ ಹೋರಾಟವಲ್ಲ, ಬದಲಾಗಿ ಭಾರತದ ಆಶಯವನ್ನು ರಕ್ಷಿಸುವ ಹಾಗೂ ಅದನ್ನು ನಾಶ ಪಡಿಸುವವರ ನಡುವಿನ ಹೋರಾಟ” ಎಂದು ಹೇಳಿದರು.

ಇಂದು ನಮ್ಮ ಎರಡನೇ ಸಭೆಯಾಗಿದ್ದು, ಇಂದಿನ ಸಭೆಯಲ್ಲಿ ಉತ್ತಮ ಚರ್ಚೆ ಆಗಿದೆ. ನಮ್ಮ ಹೋರಾಟ ಬಿಜೆಪಿ ವಿಚಾರಧಾರೆ, ಅವರ ಚಿಂತನೆ ವಿರುದ್ಧ. ಅವರು ದೇಶದ ಮೇಲೆ ಆಕ್ರಮಣ ಮಾಡಿ, ನಿರುದ್ಯೋಗ ಹರಡುತ್ತಿದ್ದು, ದೇಶದ ಸಂಪೂರ್ಣ ಸಂಪತ್ತು ಕೆಲವು ಉದ್ಯಮಿಗಳ ವಶಕ್ಕೆ ಸೇರುತ್ತಿದೆ. ಈ ಕಾರಣಕ್ಕೆ ನಾವು ನಮಗೆ ಪ್ರಶ್ನೆ ಕೇಳಿಕೊಂಡು ಈ ಹೋರಾಟ ಯಾರ ನಡುವೆ? ಇದು ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವಣ ಹೋರಾಟವಲ್ಲ. ಇದು ದೇಶದ ಧ್ವನಿಯ ಪರವಾದ ಹೋರಾಟ. ಈ ಕಾರಣಕ್ಕೆ ಈ ಮೈತ್ರಿಗೆ INDIA ಎಂದು ಹೆಸರಿಡಲಾಗಿದೆ. ಈ ಹೋರಾಟ ಎನ್ ಡಿಎ ಹಾಗೂ ಇಂಡಿಯಾ ವಿರುದ್ಧ, ಇಂಡಿಯಾ ಹಾಗೂ ಮೋದಿ ವಿರುದ್ಧದ ಹೋರಾಟ ಎಂದು ಅವರು ಹೇಳಿದ್ದಾರೆ.

ಭಾರತದ ಆಶಯದ ವಿರುದ್ಧ ಹೋರಾಡಲು ಯಾರಿಗೂ ಸಾಧ್ಯವಾಗಿಲ್ಲ, ಇತಿಹಾಸ ಗಮನಿಸಿದರೆ ಇದು ನಮಗೆ ಅರ್ಥವಾಗುತ್ತದೆ. ದೇಶದ ಮೇಲೆ ದಾಳಿ ಮಾಡುತ್ತಿರುವ ಬಿಜೆಪಿಯ ಸಿದ್ಧಾಂತದ ವಿರುದ್ಧ ನಮ್ಮ ಹೋರಾಟ ಎಂದು ರಾಹುಲ್‌ ಗಾಂಧಿ ಹೇಳಿದರು.

ತಮ್ಮ ಮಿತ್ರಪಕ್ಷ ಒಕ್ಕೂಟವನ್ನು ದೇಶಕ್ಕೆ ಮತ್ತೆ ಧ್ವನಿ ನೀಡುವ ಹೋರಾಟ ಎಂದು ಕರೆದ ಅವರು, ಇದು ಭಾರತದ ಆಶಯ ಮತ್ತು ನರೇಂದ್ರ ಮೋದಿ ನಡುವಿನ ಹೋರಾಟ ಎಂದು ಹೇಳಿದರು. ಯಾರೇ ಇಂಡಿಯಾ ವಿರುದ್ಧ ನಿಂತರು ಗೆಲವು ಯಾರಿಗೆ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮುಂದಿನ ಸಭೆ ಮಹಾರಾಷ್ಟ್ರದಲ್ಲಿ ನಡೆಯಲಿದ್ದು, ಕಾರ್ಯ ಯೋಜನೆ ಸಿದ್ಧಪಡಿಸಿ ನಾವು ಒಂದಾಗಿ ನಮ್ಮ ವಿಚಾರಧಾರೆಗಳನ್ನು ಜನರಿಗೆ ತಿಳಿಸಬೇಕಿದೆ. ಬಿಜೆಪಿಯ ಸಿದ್ಧಾಂತಗಳು ಭಾರತದ ಪರಿಕಲ್ಪನೆ ಮೇಲೆ ದಾಳಿ ಮಾಡುತ್ತಿದೆ. ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಅವರು ಹೇಳಿದರು.

ಇದು ರಾಜಕೀಯ ಪಕ್ಷಗಳ ಹೋರಾಟವಲ್ಲ. ಇದು ಇಂಡಿಯಾದ ಪರಿಕಲ್ಪನೆ ರಕ್ಷಣೆಯ ಹೋರಾಟವಾಗಿದ್ದು, ನಾವು ಪ್ರಜಾಪ್ರಭುತ್ವ, ಸಂವಿಧಾನ, ಜನರ ಧ್ವನಿಯ ರಕ್ಷಣೆಗೆ ಹೋರಾಟ ಮಾಡುತ್ತಿದ್ದು, ಈ ಕಾರಣಕ್ಕೆ ನಾವು ನಮ್ಮ ಮೈತ್ರಿಯನ್ನು ಇಂಡಿಯಾ ಎಂದು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News