ತಿರುವನಂತಪುರ | ಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಪೌರ ಕಾರ್ಮಿಕನಿಗಾಗಿ ಮುಂದುವರಿದ ಶೋಧ

Update: 2024-07-14 20:15 IST
ತಿರುವನಂತಪುರ | ಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಪೌರ ಕಾರ್ಮಿಕನಿಗಾಗಿ ಮುಂದುವರಿದ ಶೋಧ

PC : PTI 

  • whatsapp icon

ತಿರುವಂತಪುರ : ಇಲ್ಲಿಯ ರೈಲ್ವೆ ನಿಲ್ದಾಣ ಸಮೀಪದ ಅಮಯಿಳಂಜಾನ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿರುವ ಮಹಾನಗರ ಪಾಲಿಕೆಯ ಪೌರ ಕಾರ್ಮಿಕಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ಮುಂದುವರಿದಿದೆ ಎಂದು ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯ ಮಹಾ ನಿರ್ದೇಶಕ ಕೆ.ಪದ್ಮಕುಮಾರ್ ಅವರು ರವಿವಾರ ಇಲ್ಲಿ ತಿಳಿಸಿದರು. ಕಾರ್ಯಾಚರಣೆಯಲ್ಲಿ ಸ್ಕೂಬಾ ಡೈವರ್‌ಗಳು ಮತ್ತು ರೋಬಾಟ್‌ಗಳನ್ನೂ ತೊಡಗಿಸಲಾಗಿದೆ.

ಪೌರ ಕಾರ್ಮಿಕ ಜಾಯ್ (42) ಕಾಲುವೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಭಾರೀ ಮಳೆಯಿಂದಾಗಿ ಏಕಾಏಕಿ ನೀರಿನ ಭಾರೀ ಹರಿವಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಕಾಲುವೆಯಲ್ಲಿ ಅತಿಯಾಗಿ ತ್ಯಾಜ್ಯಗಳು ತುಂಬಿಕೊಂಡಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯನ್ನುಂಟು ಮಾಡುತ್ತಿದ್ದು, ಮುಳುಗುಗಾರರಿಗೆ ಅಪಾಯಕಾರಿಯಾಗಿದೆ. ಈ ಇಡೀ ಪ್ರದೇಶವು ರೈಲು ಮಾರ್ಗದ ಅಡಿಯಲ್ಲಿದ್ದು, ಒಳಗಡೆ ಹಳೆಯ ಕಾಲುವೆಗಳ ಬೃಹತ್ ಜಾಲವಿದೆ. ಸ್ಕೂಬಾ ಡೈವರ್‌ಗಳು 60 ಅಡಿಗಳಷ್ಟು ಆಳವನ್ನು ತಲುಪಿದ್ದರು, ಆದರೆ ಮುಂದಕ್ಕೆ ಸಾಗುವುದು ಕಷ್ಟಕರವಾಗಿತ್ತು. ಅದು ಅವರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿತ್ತು ಎಂದು ವಿವರಿಸಿದ ಪದ್ಮಕುಮಾರ್,‘ಇನ್ನೂ 80 ಮೀ.ಬಾಕಿಯಿದೆ, ಆದರೆ ವರ್ಷಗಳಿಂದಲೂ ಈ ಪ್ರದೇಶದಲ್ಲಿ ತ್ಯಾಜ್ಯಗಳು ತುಂಬಿಕೊಂಡಿರುವುದರಿಂದ ಮುಂದುವರಿಯುವಂತೆ ಡೈವರ್‌ಗಳಿಗೆ ಸೂಚಿಸುವುದು ಕಷ್ಟ. ನಾವು ಒಂದು ತುದಿಯಿಂದ ಪ್ರವೇಶಿಸಿ 60 ಮೀ.ಸಾಗಿದ್ದೆವು, ಈಗ ಇನ್ನೊಂದು ತುದಿಯಿಂದ ಪ್ರವೇಶಿಸಲು ಪ್ರಯತ್ನಿಸುತ್ತೇವೆ. ಈ ಪ್ರದೇಶವು ಮಣ್ಣು ಮತ್ತು ಕೆಸರಿನಿಂದ ಆವೃತವಾಗಿರುವುದರಿಂದ ಒಂದೊಂದು ಇಂಚೂ ಮುಂದಕ್ಕೆ ಸಾಗುವುದು ಸವಾಲಿನದಾಗಿದೆ. ಶವವು ಆಳದಲ್ಲಿ ಹೂತುಹೋಗಿರಬಹುದು ಎಂದು ನಾವು ಭಾವಿಸಿದ್ದೇವೆ ಮತ್ತು ಅದನ್ನು ಹೊರತೆಗೆಯಲು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ಕಾರ್ಯಾಚರಣೆಯಲ್ಲಿ ಜೆನ್‌ರೊಬಾಟಿಕ್ ಆ್ಯಂಡ್ ಇನ್ನೊವೇಷನ್‌ನ ತಂಡವೂ ಭಾಗಿಯಾಗಿದ್ದು, ಅದರ ಸಿಇಒ ವಿಮಲ್ ಗೋವಿಂದ್ ಅವರು,‘ತುಂಬ ಸಮಸ್ಯೆಗಳು ಎದುರಾಗುತ್ತಿವೆ. ಶವವನ್ನು ಪತ್ತೆ ಹಚ್ಚಲು ನಾವು ರೋವರ್‌ವೊಂದನ್ನು ನಿಯೋಜಿಸಿದ್ದೇವೆ. ಕಾಲುವೆಯಲ್ಲಿ ಅತಿಯಾದ ತ್ಯಾಜ್ಯ ತುಂಬಿಕೊಂಡಿದ್ದು, ಅದನ್ನು ತೆರವುಗೊಳಿಸುವುದು ಕಠಿಣವಾಗಿದೆʼ ಎಂದು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News