ಅಹಂಕಾರ ಮೆರೆದವರನ್ನು ಶ್ರೀ ರಾಮ 241ಕ್ಕೆ ತಡೆದ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಆರೆಸ್ಸೆಸ್‌ ನಾಯಕ ಇಂದ್ರೇಶ್‌ ಕುಮಾರ್‌

Update: 2024-06-14 05:34 GMT

ಆರೆಸ್ಸೆಸ್‌ ನಾಯಕ ಇಂದ್ರೇಶ್‌ ಕುಮಾರ್ (Photo: news18.com)

ಜೈಪುರ: ಲೋಕಸಭಾ ಚುನಾವಣೆಯ ಫಲಿತಾಂಶಗಳ ನಂತರ ಆರೆಸ್ಸೆಸ್‌ ನಾಯಕ ಇಂದ್ರೇಶ್‌ ಕುಮಾರ್ ಆಡಳಿತ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ ಹಾಗೂ ʼಅಹಂಕಾರʼಕ್ಕಾಗಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೇ ಸಮಯ “ರಾಮ-ವಿರೋಧಿ” ಆಗಿದ್ದಕ್ಕೆ ಇಂಡಿಯಾ ಮೈತ್ರಿಕೂಟವನ್ನು ಅವರು ಟೀಕಿಸಿದ್ದಾರೆ. ಆದರೆ ಈ ಮಾತುಗಳನ್ನಾಡುವಾಗ ಅವರು ಪಕ್ಷಗಳ ಹೆಸರುಗಳನ್ನೆತ್ತಿಲ್ಲ ಎಂದು timesofindia ವರದಿ ಮಾಡಿದೆ.

ಜೈಪುರದ ಸಮೀಪದ ಕನೋಟಾ ಎಂಬಲ್ಲಿ ರಾಮರಥ ಅಯೋಧ್ಯೆ ಯಾತ್ರಾ ದರ್ಶನ್‌ ಪೂಜಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು “ಭಕ್ತಿಯನ್ನು ಮೆರೆದರೂ ಅಹಂಕಾರಿಯಾದ ಪಕ್ಷವನ್ನು 241ಕ್ಕೆ ತಡೆಯಲಾಯಿತು ಆದರೆ ಅದನ್ನು ಅತ್ಯಂತ ದೊಡ್ಡ ಪಕ್ಷವನ್ನಾಗಿಸಲಾಯಿತು,” ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

“ಮತ್ತು ರಾಮನ ಮೇಲೆ ಭಕ್ತಿ ಇಲ್ಲದವರನ್ನು ಜೊತೆಯಾಗಿ 234 ಕ್ಕೆ ನಿಲ್ಲಿಸಲಾಯಿತು,” ಎಂದು ಇಂಡಿಯಾ ಮೈತ್ರಿಕೂಟವನ್ನು ಪರೋಕ್ಷವಾಗಿ ಇಂದ್ರೇಶ್‌ ಕುಮಾರ್‌ ಉಲ್ಲೇಖಿಸಿದ್ದಾರೆ.

“ಪ್ರಜಾಪ್ರಭುತ್ವದಲ್ಲಿ ರಾಮ ರಾಜ್ಯದ ವಿಧಾನವನ್ನು ನೋಡಿ. ಯಾರು ರಾಮನ ಮೇಲೆ ಭಕ್ತಿ ತೋರಿಸಿ ನಂತರ ಅಹಂಕಾರಿಯಾದರು, ಆ ಪಕ್ಷ ಅತ್ಯಂತ ದೊಡ್ಡ ಪಕ್ಷವಾಯಿತು, ಆದರೆ ನೀಡಬೇಕಾಗಿದ್ದ ಮತ ಮತ್ತು ಶಕ್ತಿಯನ್ನು ಅವರ ಅಹಂಕಾರದ ಕಾರಣ ದೇವರು ತಡೆದರು,” ಎಂದು ಅವರು ಹೇಳಿದರು.

“ರಾಮನನ್ನು ವಿರೋಧಿಸಿದವರಲ್ಲಿ ಯಾರಿಗೂ ಅಧಿಕಾರ ಸಿಕ್ಕಿಲ್ಲ. ಎಲ್ಲರೂ ಜೊತೆಯಾಗಿದ್ದರೂ ಎರಡನೇ ಸ್ಥಾನ ದೊರೆಯಿತು. ದೇವರ ನ್ಯಾಯ ನಿಜ ಮತ್ತು ಆನಂದದಾಯಕ,” ಎಂದು ಅವರು ಹೇಳಿದರು.

“ರಾಮನನ್ನು ಆರಾಧಿಸುವವರು ವಿನೀತರಾಗಿರಬೇಕು ಮತ್ತು ರಾಮನನ್ನು ವಿರೋಧಿಸಿದವರನ್ನು ರಾಮನೇ ನೋಡಿಕೊಂಡ,” ಎಂದು ಅವರು ಹೇಳಿದರು.

“ಶ್ರೀರಾಮ ದೇವರು ಯಾರಿಗೂ ನೋವುಂಟು ಮಾಡುವುದಿಲ್ಲ, ಎಲ್ಲರಿಗೂ ನ್ಯಾಯ ಒದಗಿಸುತ್ತಾರೆ. ಶ್ರೀ ರಾಮ ಯಾವತ್ತೂ ನ್ಯಾಯದ ಪರ ಆಗಿರುತ್ತಾರೆ,” ಎಂದು ಇಂದ್ರೇಶ್‌ ಕುಮಾರ್‌ ಹೇಳಿದರು.

“ನಿಜವಾದ ಸೇವಕ ಜನರ ಸೇವೆಯನ್ನು ಅಹಂಕಾರವಿಲ್ಲದೆ ಮಾಡಬೇಕು ಮತ್ತು ಘನತೆ ಕಾಪಾಡಬೇಕು,” ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಇತ್ತೀಚೆಗೆ ಹೇಳಿದ ಬೆನ್ನಲ್ಲೇ ಇಂದ್ರೇಶ್‌ ಕುಮಾರ್‌ ಅವರ ಹೇಳಿಕೆ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News