ಸುಳ್ಳು ಹೇಳಿಕೆ ನೀಡುವಂತೆ ಈಡಿ ಯಿಂದ ಜನರಿಗೆ ಬೆದರಿಕೆ: ಅತಿಶಿ ಆರೋಪ

Update: 2024-02-06 15:52 GMT

ಅತಿಶಿ | Photo: PTI 

ಹೊಸದಿಲ್ಲಿ: ಜಾರಿ ನಿರ್ದೇಶನಾಲಯ ಸಾಕ್ಷ್ಯಗಳ ಅಡಿಯೊ ರೆಕಾರ್ಡಿಂಗ್ ಅನ್ನು ಅಳಿಸಿದೆ ಹಾಗೂ ಆಮ್ ಆದ್ಮಿ ಪಕ್ಷ (ಎಎಪಿ)ದ ನಾಯಕರ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಜನರಿಗೆ ಬೆದರಿಕೆ ಒಡ್ಡಿದೆ ಎಂದು ಆಪ್ ಸಚಿವೆ ಅತಿಶಿ ಅವರು ಮಂಗಳವಾರ ಆರೋಪಿಸಿದ್ದಾರೆ.

‘‘ಅಬಕಾರಿ ನೀತಿ ಪ್ರಕರಣದ ಕುರಿತಂತೆ ಆಪ್ ನಾಯಕರ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಜಾರಿ ನಿರ್ದೇಶನಾಲಯ ಜನರನ್ನು ಬಲವಂತಪಡಿಸಿದೆ ಹಾಗೂ ಬೆದರಿಕೆ ಒಡ್ಡಿದೆ. ಪಕ್ಷವನ್ನು ಮೌನವಾಗಿರಿಸಿಲು ಆಪ್ ನಾಯಕರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸುತ್ತಿದೆ’’ ಎಂದು ಅತಿಶಿ ಹೇಳಿದ್ದಾರೆ.

ಜಾರಿ ನಿರ್ದೇಶನಾಲಯ ಕಳೆದ ಎರಡು ವರ್ಷಗಳಿಂದ ಆಪ್ ನಾಯಕರಿಗೆ ಬೆದರಿಕೆ ಒಡ್ಡುತ್ತಿದೆ. ಅಬಕಾರಿ ನೀತಿ ಹಗರಣದ ಹೆಸರಲ್ಲಿ ಕೆಲವರ ಮನೆ ಮೇಲೆ ದಾಳಿ ನಡೆಸಿದೆ. ಇನ್ನು ಕೆಲವರಿಗೆ ಸಮನ್ಸ್ ನೀಡಿದೆ. ಮತ್ತೆ ಕೆಲವರನ್ನು ಬಂಧಿಸಿದೆ ಎಂದು ಅವರು ಹೇಳಿದ್ದಾರೆ.

ಎರಡು ವರ್ಷಗಳಲ್ಲಿ ನೂರಾರು ದಾಳಿಗಳ ಬಳಿಕವೂ ಜಾರಿ ನಿರ್ದೇಶನಾಲಯಕ್ಕೆ ಒಂದೇ ಒಂದು ರೂಪಾಯಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಯಾವುದೇ ಗಟ್ಟಿ ಪುರಾವೆ ದೊರಕಿಲ್ಲ. ನ್ಯಾಯಾಲಯ ಕೂಡ ಪುರಾವೆಗಳನ್ನು ಸಲ್ಲಿಸಬೇಕು ಎಂದು ಜಾರಿ ನಿರ್ದೇಶನಾಲಯಕ್ಕೆ ಮತ್ತೆ ಮತ್ತೆ ಸೂಚಿಸುತ್ತಿದೆ’’ ಎಂದು ಅವರು ಪ್ರತಿಪಾದಿಸಿದರು.

ಆಪ್ ನಾಯಕರು ಹಾಗೂ ಆಪ್‌ ಗೆ ಸಂಬಂಧಿಸಿದ ಜನರ ವಿರುದ್ಧ ಜಾರಿ ನಿರ್ದೇಶನಾಲಯದ ದಾಳಿ ಮುಂದುವರಿಸಿದೆ. ಆಪ್ನ ಕೋಶಾಧಿಕಾರಿ ಹಾಗೂ ಸಂಸದ ಎನ್ಡಿ ಗುಪ್ತಾ, ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಹಾಗೂ ಇತರರ ನಿವಾಸಗಳ ಮೇಲೆ ದಾಳಿ ನಡೆದಿದೆ. ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಪಕ್ಷವನ್ನು ದಮನಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ನಾವು ಭಯಪಡಲಾರೆವು ಎಂದು ಅವರಿಗೆ ಹೇಳಲು ಬಯಸುತ್ತೇನೆ ಎಂದು ಅತಿಶಿ ಅವರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News