ಉದ್ಯಮಿಗೆ ಭಯೋತ್ಪಾದನೆಯೊಂದಿಗೆ ತಳುಕು ಹಾಕುವ ಬೆದರಿಕೆ, ಸುಲಿಗೆ

Update: 2023-09-05 16:54 GMT

ಸಾಂದರ್ಭಿಕ ಚಿತ್ರ.

ಗುವಾಹಟಿ: ಉದ್ಯಮಿಯೋರ್ವರಿಗೆ ಭಯೋತ್ಪಾದನೆಯೊಂದಿಗೆ ನಂಟು ಕಲ್ಪಿಸುವುದಾಗಿ ಬೆದರಿಕೆಯೊಡ್ಡಿ ಹಣ ಸುಲಿಗೆ ಮಾಡಿದ ಆರೋಪದಲ್ಲಿ ಅರು ಪೋಲಿಸ್ ಅಧಿಕಾರಿಗಳು ಸೇರಿದಂತೆ 9 ಜನರನ್ನು ಅಸ್ಸಾಂ ಅಪರಾಧ ತನಿಖಾ ವಿಭಾಗವು ಬಂಧಿಸಿದೆ.

ಬಜಾಲಿ ಜಿಲ್ಲಾ ಪೊಲೀಸರು ತನ್ನನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಂಡಿದ್ದರು ಮತ್ತು 2.5 ಕೋ.ರೂ.ಗಳನ್ನು ನೀಡುವಂತೆ ತಿಳಿಸಿದ್ದರು. ಹಣ ನೀಡದಿದ್ದರೆ ತನ್ನನ್ನು ಎನ್ಕೌಂಟರ್ನಲ್ಲಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಉದ್ಯಮಿ ರಬಿಯುಲ್ ಇಸ್ಲಾಮ್ ತನ್ನ ದೂರಿನಲ್ಲಿ ಆರೋಪಿಸಿದ್ದರು. ತಾನು ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ಜಿಹಾದಿ ಶಕ್ತಿಗಳೊಂದಿಗೆ ಸಂಬಂಧಗಳನ್ನು ಹೊಂದಿರುವುದಾಗಿ ಆರೋಪಿಸಿ ಹತ್ಯೆಯನ್ನು ಸಮರ್ಥಿಸಿಕೊಳ್ಳುವುದಾಗಿಯೂ ಅವರು ಹೇಳಿದ್ದರು ಎಂದು ಇಸ್ಲಾಮ್ ತನ್ನ ದೂರಿನಲ್ಲಿ ತಿಳಿಸಿದ್ದರು.

ಆರೋಪಿಗಳನ್ನು ಬಲೆಗೆ ಬೀಳಿಸಲು ಕಾರ್ಯತಂತ್ರವನ್ನು ರೂಪಿಸುವಂತೆ ಜಾಗೃತ ಮತ್ತು ಭ್ರಷ್ಟಾಚಾರ ನಿರ್ದೇಶನಾಲಯಕ್ಕೆ ಸೂಚಿಸಲಾಗಿತ್ತು. ಆದರೆ ಆರೋಪಿ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದರಿಂದ ಅದು ಯಶಸ್ವಿಯಾಗಿರಲಿಲ್ಲ ಎಂದು ಡಿಜಿಪಿ ಜಿ.ಪಿ.ಸಿಂಗ್ ತಿಳಿಸಿದರು.

ಆದರೂ, ಆರೋಪಗಳು ನಿಜವೆಂಬಂತೆ ಕಂಡುಬಂದಿದ್ದರಿಂದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಹಿಂದೆ ಬಜಾಲಿ ಎಸ್ಪಿಯಾಗಿದ್ದು ಹಾಲಿ ಅಸ್ಸಾಂ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿದ್ಧಾರ್ಥ ಬರಗೋಹೈನ್, ಹೆಚ್ಚುವರಿ ಎಸ್ಪಿ ಗಾಯತ್ರಿ ಸೊನೊವಾಲ್, ಡಿಎಸ್ಪಿ ಪುಷ್ಕಳ ಗೊಗೊಯಿ, ಪಟಚಾರ್ಕುಚಿ ಪೊಲೀಸ್ ಠಾಣಾಧಿಕಾರಿ ಅರ್ನಾಬ್ ಜ್ಯೋತಿ ಪಟಿರ್, ಭವಾನಿಪುರ ಹೊರಠಾಣೆಯ ಇನ್ಸ್ಪೆಕ್ಟರ್ ದೇವಜಿತ್ ಗಿರಿ ಮತ್ತು ಎಎಸ್ಐ ಶಶಾಂಕ ದಾಸ್ ಅವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿತ್ತು.

ಜು.16ರಂದು ರಾತ್ರಿ ಇಸ್ಲಾಮ್ ಮನೆಗೆ ಬಲವಂತದಿಂದ ನುಗ್ಗಿದ್ದ ಪೊಲೀಸರ ಗುಂಪು ಅವರನ್ನು ಹೊರಗೆಳೆದು ಮಾದಕದ್ರವ್ಯಗಳು ಮತ್ತು ಹಣದ ಕುರಿತು ವಿಚಾರಿಸಿತ್ತು. ಪೊಲೀಸರು ಯಾವುದರ ಬಗ್ಗೆ ಉಲ್ಲೇಖಿಸುತ್ತಿದ್ದಾರೆ ಎನ್ನುವುದು ತನಗೆ ಅರ್ಥವಾಗುತ್ತಿಲ್ಲ ಎಂದು ಇಸ್ಲಾಮ್ ಹೇಳಿದ್ದರು. ಇಷ್ಟಾದ ಬಳಿಕ ಪೊಲೀಸರು 2-3 ಗಂಟೆಗಳ ಕಾಲ ಅವರನ್ನು ಥಳಿಸಿದ್ದರು ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ಪೊಲೀಸರು ತನ್ನನ್ನು ಮತ್ತು ತನ್ನ ಸಂಬಂಧಿಕರಿಬ್ಬರನ್ನು ಅಕ್ರಮವಾಗಿ ಭವಾನಿಪುರ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದರು. ತನ್ನನ್ನು ಕೊಲ್ಲುವುದಾಗಿ ಮತ್ತು ಬಳಿಕ ಭಯೋತ್ಪಾದನೆಯೊಂದಿಗೆ ನಂಟು ಹೊಂದಿದ್ದಾಗಿ ಆರೋಪಿಸುವುದಾಗಿ ತನಗೆ ಬೆದರಿಕೆಯೊಡ್ಡಿದ್ದ ಪೋಲಿಸರು ತನ್ನಿಂದ 10 ಲ.ರೂ.ಗಳನ್ನು ಕಿತ್ತುಕೊಂಡಿದ್ದರು. ಆದರೆ 10 ಲ.ರೂ.ಗಳನ್ನು ನೀಡಿದ ಬಳಿಕವೂ ಪೊಲೀಸರು ತನ್ನನ್ನು ಬಿಡುಗಡೆಗೊಳಿಸಿರಲಿಲ್ಲ ಮತ್ತು ಹೆಚ್ಚುವರಿ ಎಸ್ಪಿ ಗಾಯತ್ರಿ ಸೊನೊವಾಲ್ ಇನ್ನೂ 2.5 ಕೋ.ರೂ.ಗೆ ಬೇಡಿಕೆಯನ್ನಿಟಿದ್ದರು. ಹಣವನ್ನು ನೀಡುವಂತೆ ತಾಕೀತು ಮಾಡಿ ತನ್ನನ್ನು ಬಿಡುಗಡೆಗೊಳಿಸಲಾಗಿತ್ತು ಎಂದು ಇಸ್ಲಾಮ್ ಆರೋಪಿಸಿದ್ದರು.

ಸೋಮವಾರ ಬುರಗೋಹೈನ್, ಗೊಗೊಯಿ, ಸೊನೊವಾಲ್ ಮತ್ತು ಅವರ ಪತಿ ಸುಭಾಷ್ಚಂದ್ರ ಮತ್ತು ಕಾನ್ಸ್‌ಟೇಬಲ್ ಇಂಜಮಾಮುಲ್ ಹಸನ್ರನ್ನು ಪೊಲೀಸರು ಬಂಧಿಸಿದ್ದಾರೆ. ಕಿಶೋರ ಬರುವಾ, ಪೊಲೀಸ್ ವಾಹನಗಳ ಚಾಲಕರಾದ ನಬೀರ್ ಅಹ್ಮದ್ ಮತ್ತು ದೀಪಜಾಯ್ ಕಲಿಟಾ ಎನ್ನುವವರನ್ನೂ ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಮಂತ ಬಿಸ್ವ ಶರ್ಮಾ ಅವರು ರವಿವಾರ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News