ಒಂದು ವಾರದಲ್ಲಿ ರೈಲು ಹಳಿ ತಪ್ಪಿಸುವ ಮೂರು ಪ್ರಯತ್ನ: ರೈಲ್ವೆ ಆತಂಕ

Update: 2024-09-10 04:03 GMT

PC: PTI

ಹೊಸದಿಲ್ಲಿ: ಕಳೆದ ಒಂದು ವಾರದಲ್ಲಿ ರೈಲು ಹಳಿ ತಪ್ಪಿಸುವ ಮೂರು ಪ್ರಯತ್ನಗಳು ಬೆಳಕಿಗೆ ಬಂದಿದ್ದು, ಇದರ ಜತೆಗೆ ರೈಲಿಗೆ ಕಲ್ಲೆಸೆದ ಎರಡು ಘಟನೆಗಳೂ ವರದಿಯಾಗಿವೆ. ಅಪರಾಧ ಉದ್ದೇಶದ ಕಿಡಿಗೇಡಿ ಈ ಕೃತ್ಯಗಳು ರೈಲ್ವೆ ಸುರಕ್ಷತೆ ಬಗ್ಗೆ ಹೊಸ ಆತಂಕಕ್ಕೆ ಕಾರಣವಾಗಿವೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಕಾನ್ಪುರ ಬಳಿ ರೈಲು ಹಳಿಯ ಮೇಲೆ ಅಡುಗೆ ಅನಿಲ ಸಿಲಿಂಡರ್ ಇರಿಸಿದ ಘಟನೆಯಲ್ಲಿ ಲೋಕೊ ಪೈಲಟ್ ತುರ್ತು ಬ್ರೇಕ್ ಅನ್ವಯಿಸಿದ್ದರಿಂದ ಅಪಘಾತ ಸಂಭವಿಸಿಲ್ಲ. ಇದರಿಂದಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ ಎಂದು ಇಲಾಖೆ ವಿವರಿಸಿದೆ. ಈ ಘಟನಾ ಸ್ಥಳದಲ್ಲಿ ಬೆಂಕಿಪೆಟ್ಟಿಗೆ ಮತ್ತು ಪೆಟ್ರೋಲ್ ಕೂಡಾ ಪತ್ತೆಯಾಗಿದೆ. ಇದು ಅಪರಾಧ ಉದ್ದೇಶದ ಕೃತ್ಯ ಎನ್ನುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನ ಮೂಲದ ಉಗ್ರನೊಬ್ಬ ಟೆಲಿಗ್ರಾಂನಲ್ಲಿ ವಿಡಿಯೊ ಬಿಡುಗಡೆ ಮಾಡಿ, ದೊಡ್ಡ ಪ್ರಮಾಣದ ರೈಲು ಹಳಿತಪ್ಪಿಸುವ ಪ್ರಯತ್ನಗಳನ್ನು ಮಾಡಿ ಎಂದು ಅನುಯಾಯಿಗಳನ್ನು ಕೋರಿದ್ದ. ಮೂಲಸೌಕರ್ಯವನ್ನು ನಾಶಪಡಿಸುವ ಮತ್ತು ಪೂರೈಕೆ ಸರಣಿಯನ್ನು ತಡೆಯುವ ಪ್ರಯತ್ನ ಮಾಡುವಂತೆ ಕೇಳಿಕೊಂಡಿದ್ದ.

ಕಳೆದ ವರ್ಷದ ಜೂನ್ ನಿಂದೀಚೆಗೆ ಕ್ರಾಸಿಂಗ್ ರೈಲಿನ ಮಧ್ಯ ಮರದ ತುಂಡುಗಳು, ರೈಲು ಹಳಿಯ ಮೇಲೆ ಕಲ್ಲು ಇಟ್ಟಿರುವ, ಸಿಗ್ನಲ್ ವಿರೂಪಗೊಳಿಸಿರುವ, ಹಳಿ ಮೇಲೆ ಸಿಲಿಂಡರ್ ಇಟ್ಟಿರುವ ಕನಿಷ್ಠ 17 ಪ್ರಕರಣಗಳನ್ನು ಲೋಕೊ ಪೈಲಟ್ ಗಳು ಪತ್ತೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಪ್ರಭಾವಿಗಳು ರೈಲು ಹಳಿಗಳನ್ನು ಅನಧಿಕೃತವಾಗಿ ಬಳಕೆ ಮಾಡಿಕೊಂಡಿರುವ ನಿದರ್ಶನಗಳೂ ಸಾಕಷ್ಟಿವೆ.

ಈ ಎಲ್ಲ ಪ್ರಕರಣಗಳ ಬಗ್ಗೆ ಆರ್ ಪಿಎಫ್ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಿದ್ದು, ಕೆಲ ಕಿಡಿಗೇಡಿಗಳನ್ನು ಬಂಧಿಸಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹಳಿಗಳ ತಪಾಸಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಇದು ಅತ್ಯಂತ ಕಠಿಣ ಕೆಲಸ. ಆದರೆ ದುರಂತ ತಪ್ಪಿಸುವ ಎಲ್ಲ ಪ್ರಯತ್ನವೂ ನಡೆದಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಕೆಲ ಪ್ರಕರಣಗಳಲ್ಲಿ ಬಾಲಾಪರಾಧಿಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News