ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳು ಮೃತ್ಯು | ದಿಲ್ಲಿ ಸರಕಾರ, ಪುರಸಭೆ ಆಯುಕ್ತರಿಗೆ ಎನ್‌ಎಚ್‌ಆರ್‌ಸಿ ನೋಟಿಸ್

Update: 2024-07-30 16:46 GMT

PC : PTI 

ಹೊಸದಿಲ್ಲಿ : ಇಲ್ಲಿನ ತರಬೇತಿ ಕೇಂದ್ರದ ನೆಲಮಹಡಿಗೆ ನೀರು ನುಗ್ಗಿ ಮೂವರು ನಾಗರಿಕ ಸೇವೆ ಪರೀಕ್ಷಾ ಆಕಾಂಕ್ಷಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ದಿಲ್ಲಿ ಸರಕಾರ, ನಗರ ಪೊಲೀಸ್ ಮುಖ್ಯಸ್ಥ ಹಾಗೂ ಪುರಸಭೆಯ ಆಯುಕ್ತರಿಗೆ ನೋಟಿಸು ಜಾರಿ ಮಾಡಿದೆ.

ಘಟನೆಯ ಕುರಿತಂತೆ ಎರಡು ವಾರಗಳ ಒಳಗೆ ವಿಸ್ತೃತ ವರದಿ ಸಲ್ಲಿಸುವಂತೆ ಎನ್‌ಎಚ್‌ಆರ್‌ಸಿ ಸೂಚಿಸಿದೆ.

ದಿಲ್ಲಿಯಾದ್ಯಂತ ನಿಗದಿಪಡಿಸಲಾದ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ಇಂತಹ ಸಂಸ್ಥೆಗಳು ಹಾಗೂ ತರಬೇತಿ ಕೇಂದ್ರಗಳ ನಿಖರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಕೂಲಂಕಷ ಸಮೀಕ್ಷೆ ನಡೆಸುವಂತೆ ಕೂಡ ದಿಲ್ಲಿ ಮುಖ್ಯ ಕಾರ್ಯದರ್ಶಿ ಅವರಿಗೆ ಎನ್‌ಎಚ್‌ಆರ್‌ಸಿ ನಿರ್ದೇಶಿಸಿದೆ.

ಇಂತಹ ಸಂಸ್ಥೆಗಳ ವಿರುದ್ಧ ಬಾಕಿ ಇರುವ ದೂರುಗಳು, ಸಂಬಂಧಿತ ಇಲಾಖೆಗಳು ಕೈಗೊಂಡ ಕ್ರಮಗಳು ಸೇರಿದಂತೆ ಈ ಸಂಸ್ಥೆಗಳ ಕುರಿತ ಪ್ರತಿ ವಿವರವನ್ನು ವರದಿಯಲ್ಲಿ ಉಲ್ಲೇಖಿಸಬೇಕು ಎಂದು ಎನ್‌ಎಚ್‌ಆರ್‌ಸಿ ಸೂಚಿಸಿದೆ.

ಜುಲೈ 27ರಂದು ದಿಲ್ಲಿಯಲ್ಲಿರುವ ಪ್ರಮುಖ ನಾಗರಿಕ ಸೇವಾ ಪರೀಕ್ಷೆ ತರಬೇತಿ ಕೇಂದ್ರದ ತಳ ಅಂತಸ್ತಿನಲ್ಲಿರುವ ಗ್ರಂಥಾಲಯಕ್ಕೆ ನುಗ್ಗಿದ ನೆರೆ ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಮಾಧ್ಯಮ ವರದಿಯನ್ನು ಸ್ವಯಂ ಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News