ಜಿ20 ಶೃಂಗ ಸಮ್ಮೇಳನದ ವೇಳೆ ಟ್ವೀಟ್ ಗೆ ತಡೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವೆ: ತೃಣಮೂಲ ಕಾಂಗ್ರೆಸ್ ಸಂಸದ

Update: 2023-10-06 16:28 GMT

Photo : Saket Gokhale/Facebook

ಹೊಸದಿಲ್ಲಿ : ಸೆಪ್ಟಂಬರ್ ನಲ್ಲಿ ನಡೆದ ಜಿ20 ಶೃಂಗ ಸಮ್ಮೇಳನದ ವೇಳೆ, ಮಣಿಪುರದಲ್ಲಿನ ಅಶಾಂತಿ ಬಗ್ಗೆ ನಾನು ಮಾಡಿರುವ ಟ್ವೀಟನ್ನು ತಡೆಹಿಡಿಯಲು ಕೇಂದ್ರ ಸರಕಾರ ನೀಡಿರುವ ಆದೇಶವನ್ನು ಪ್ರಶ್ನಿಸುವುದಾಗಿ ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಶುಕ್ರವಾರ ಹೇಳಿದ್ದಾರೆ.

ಮಣಿಪುರದ ಜನಾಂಗೀಯ ಹಿಂಸಾಚಾರದ ಬಗ್ಗೆ ನೀವು ಮಾಡಿರುವ ಟ್ವೀಟನ್ನು ಶೃಂಗ ಸಮ್ಮೇಳನದ ವೇಳೆ ತಡೆಹಿಡಿಯಲಾಗಿತ್ತು, ಯಾಕೆಂದರೆ ಅದು ದೇಶದ ಜಾಗತಿಕ ಪ್ರತಿಷ್ಠೆಗೆ ಹಾನಿ ಮಾಡಬಹುದಾಗಿತ್ತು ಎಂಬುದಾಗಿ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗುರುವಾರ ಗೋಖಲೆಗೆ ತಿಳಿಸಿದೆ.

ಮಣಿಪುರದಲ್ಲಿ ಕುಕಿ ಮತ್ತು ಮೇತೈ ಜನಾಂಗೀಯರ ನಡುವೆ ಮೇ 3ರಿಂದ ಹಿಂಸಾಚಾರ ನಡೆಯುತ್ತಿದೆ. ಹಿಂಸಾಚಾರದಲ್ಲಿ 200ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಕನಿಷ್ಠ 60,000 ಮಂದಿ ನಿರ್ವಸಿತರಾಗಿದ್ದಾರೆ.

ಸೆಪ್ಟಂಬರ್ 5ರಂದು ಗೋಖಲೆ ಹೀಗೆ ಟ್ವೀಟ್ ಮಾಡಿದ್ದರು: ‘‘ಜಿ20 ಶೃಂಗಸಮ್ಮೇಳನದ ಮುನ್ನಾ ದಿನದಂದು, ಮಣಿಪುರದಲ್ಲಿ ನಡೆಯುತ್ತಿರುವ ಭೀಕರ ದೌರ್ಜನ್ಯಗಳು ಮತ್ತು ಮೋದಿ ಸರಕಾರದ ನಿಷ್ಕ್ರಿಯತೆ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಮಣಿಪುರ ನಿರಂತರವಾಗಿ ಉರಿಯುತ್ತಿದೆ ಮತ್ತು ಅಲ್ಲಿನ ಜನರು ಅಕ್ಷರಶಃ ಯುದ್ಧವಲಯದಲ್ಲಿ ಬದುಕುತ್ತಿದ್ದಾರೆ. ಆದರೆ, ಪ್ರಧಾನಿ ತನ್ನ ಪ್ರಚಾರವನ್ನು ಹೆಚ್ಚಿಸಿಕೊಳ್ಳುವ ಕಸರತ್ತಿನಲ್ಲಿ ಮಗ್ನರಾಗಿದ್ದಾರೆ’’. ಆ ಟ್ವೀಟನ್ನು ತಡೆಹಿಡಿಯಲಾಗಿತ್ತು.

ಈಗ ಆ ಟ್ವೀಟ್ ಮೇಲಿನ ತಡೆಯನ್ನು ತೆರವುಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

‘‘ನನ್ನ ಟ್ವೀಟ್ ಕಾನೂನುಬಾಹಿರವಾಗಿರಲಿಲ್ಲ. ಜಿ20 ಶೃಂಗ ಸಮ್ಮೇಳನದ ಅವಧಿಯಲ್ಲಿ, ಪ್ರಧಾನಿ ನರೇಂದ್ರ ಮೋದಿಯ ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಅದಕ್ಕೆ ನಿರ್ಬಂಧ ಹೇರಲಾಗಿತ್ತು. ಇದು ಅಘೋಷಿತ ತುರ್ತುಪರಿಸ್ಥಿತಿಯಲ್ಲದೆ ಮತ್ತೇನು?’’ ಎಂದು ಶುಕ್ರವಾರ ಗೋಖಲೆ  x ನಲ್ಲಿ ಬರೆದಿದ್ದಾರೆ. ಇದನ್ನು ನಾನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News