ರೈಲಿನ ಅಪ್ಪರ್ ಬರ್ತ್ ಕುಸಿತ ; ಕೇರಳದ ವ್ಯಕ್ತಿ ಮೃತ್ಯು
ಹೊಸದಿಲ್ಲಿ: ತ್ರಿಶೂರ್‌ನಿಂದ ಹೊಸದಿಲ್ಲಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೇರಳದ ನಿವಾಸಿಯೊಬ್ಬರು ಅಪ್ಪರ್ ಬರ್ತ್ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಜೂನ್ 16 ರಂದು ಈ ಘಟನೆ ವರದಿಯಾಗಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ 62 ವರ್ಷದ ಎಂ ಅಲಿಖಾನ್ ಸೋಮವಾರ ನಿಧನರಾದರು ಎಂದು ತಿಳಿದು ಬಂದಿದೆ.
ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಗ್ರಾಮದ ನಿವಾಸಿ ಹಾಗೂ ವೃತ್ತಿಯಲ್ಲಿ ಎಲ್‌ಐಸಿ ಏಜೆಂಟ್ ಆದ ಅಲಿಖಾನ್, ಜೂನ್ 15ರಂದು ತಮ್ಮ ಸ್ನೇಹಿತ ಮುಹಮ್ಮದ್‌ರೊಂದಿಗೆ ಎರ್ನಾಕುಲಂ-ಹಝ್ರತ್ ನಿಝಾಮುದ್ದೀನ್ ಎಕ್ಸ್‌ಪ್ರೆಸ್ ರೈಲನ್ನೇರಿದ್ದರು. ಅವರು ತ್ರಿಶೂರ್‌ನಿಂದ ಹೊಸ ದಿಲ್ಲಿಗೆ ಪ್ರಯಾಣ ಬೆಳೆಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಅಲಿಖಾನ್ ಅವರ ಹಿರಿಯ ಸಹೋದರ ಬಕರ್, ಜಲಂಧರ್‌ನ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿರುವ ಮುಹಮ್ಮದ್ ಅವರ ಪುತ್ರಿಯನ್ನು ಭೇಟಿ ಮಾಡಲು ಅವರು ತೆರಳಿದ್ದರು. ಈ ಪ್ರಯಾಣದಲ್ಲಿ ಅಲಿಖಾನ್ ತಮ್ಮ ಸಂಗಡ ಬರಬೇಕೆಂದು ಮುಹಮ್ಮದ್ ಬಯಸಿದ್ದರು ಹಾಗೂ ಜಲಂಧರ್‌ಗೆ ತೆರಳುವುದಕ್ಕೂ ಮುನ್ನ, ಅವರಿಬ್ಬರೂ ದಿಲ್ಲಿ ಮತ್ತು ಆಗ್ರಾಗೆ ಭೇಟಿ ನೀಡಲು ಯೋಜಿಸಿದ್ದರು ಎಂದು ಹೇಳಿದ್ದಾರೆ.
ಜೂನ್ 16ರ ಸಂಜೆ ಅಲಿಖಾನ್ ಕೆಳಗಿನ ಬರ್ತ್‌ನಲ್ಲಿದ್ದಾಗ ಈ ಘಟನೆ ನಡೆದಿದೆ. ರೈಲು ತೆಲಂಗಾಣ ಮಾರ್ಗವಾಗಿ ತೆರಳುತ್ತಿದ್ದಾಗ ಕೆಳಗಿನ ಬರ್ತ್‌ನಲ್ಲಿದ್ದ ಅಲಿಖಾನ್ ಮೇಲೆ ಮೇಲಿನ ಬರ್ತ್ ಕಿತ್ತುಕೊಂಡು ಉರುಳಿತು. ಈ ಕುರಿತು ಸಹ ಪ್ರಯಾಣಿಕರು ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದರು. ನಂತರ ಅಲಿಖಾನ್‌ಗೆ ವಾರಂಗಲ್ ರೈಲು ನಿಲ್ದಾಣದ ಬಳಿಯ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಯಿತು. ಅಷ್ಟು ಹೊತ್ತಿಗೆ, ಘಟನೆ ನಡೆದ ನಂತರ ರೈಲು 100ಕ್ಕೂ ಹೆಚ್ಚು ಕಿಲೋ ಮೀಟರ್ ದೂರವನ್ನು ಕ್ರಮಿಸಿತ್ತು. ಮರುದಿನ ಅವರನ್ನು ಹೈದರಾಬಾದಿನ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರಿಗೆ ಕಳೆದ ಶನಿವಾರ ಗಂಭೀರ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಇದಾದ ನಂತರ ಅವರು ಸೋಮವಾರ ಮೃತಪಟ್ಟರು ಎಂದು ಮುಹಮ್ಮದ್ ನಮಗೆ ತಿಳಿಸಿದರು ಎಂದು ಬಕರ್ ಹೇಳಿದ್ದಾರೆ.
ಈ ಘಟನೆಯ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೈಲಿನಲ್ಲಿ ಏನಾಯಿತು ಎಂಬುದು ನಮಗೆ ತಿಳಿದಿಲ್ಲ. ಮುಹಮ್ಮದ್ ಹೇಳಿಕೆಯು ಮಾತ್ರ ನಮಗೆ ತಿಳಿದಿದೆ ಎಂದು ಬಕರ್ ತಿಳಿಸಿದ್ದಾರೆ.