ಹೊಸ ಕ್ರಿಮಿನಲ್ ಕಾನೂನುಗಳ ಹಿಂದಿ ಹೆಸರುಗಳಿಂದಾಗಿ ಹಿಂದಿಯೇತರ ಭಾಷಿಕರಿಗೆ ತೊಂದರೆ: ಹೈಕೋರ್ಟ್‌ಗೆ ಅರ್ಜಿ

Update: 2024-05-29 09:29 GMT

ಸಾಂದರ್ಭಿಕ ಚಿತ್ರ

ಕೊಚ್ಚಿ: ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸುರಕ್ಷಾ ಸಂಹಿತಾ, ಭಾರತೀಯ ನ್ಯಾಯ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಇವುಗಳಿಗೆ ಹಿಂದಿ ಹೆಸರುಗಳನ್ನು ನೀಡಿರುವ ಕೇಂದ್ರ ಸರಕಾರದ ಕ್ರಮವನ್ನು ಪ್ರಶ್ನಿಸಿ ನ್ಯಾಯವಾದಿ ಪಿ.ವಿ. ಜೀವೇಶ ಅವರು ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಎ.ಜೆ.ದೇಸಾಯಿ ಮತ್ತು ನ್ಯಾ.ವಿ.ಜಿ.ಅರುಣ ಅವರ ವಿಭಾಗೀಯ ಪೀಠವು ಬುಧವಾರದಿಂದ ಅರ್ಜಿಯ ವಿಚಾರಣೆಯನ್ನು ಆರಂಭಿಸಿದೆ.

ಕಾನೂನುಗಳಿಗೆ ಹಿಂದಿ/ಸಂಸ್ಕೃತ ಹೆಸರುಗಳನ್ನು ನೀಡಿರುವ ಕೇಂದ್ರದ ಕ್ರಮ ಅಧಿಕಾರಬಾಹಿರವಾಗಿದೆ ಎಂದು ಘೋಷಿಸುವಂತೆ, ಮೂರು ಕಾನೂನುಗಳಿಗೆ ಇಂಗ್ಲಿಷ್‌ನಲ್ಲಿ ನಾಮಕರಣ ಮಾಡಲು ನಿರ್ದೇಶಿಸುವಂತೆ ಮತ್ತು ಸಂಸತ್ತು ಕಾಯ್ದೆಗಳಿಗೆ ಇಂಗ್ಲಿಷ್ ಹೊರತುಪಡಿಸಿ ಬೇರೆ ಯಾವುದೇ ಭಾಷೆಯಲ್ಲಿ ಹೆಸರುಗಳನ್ನು ನೀಡುವಂತಿಲ್ಲ ಎಂದು ಘೋಷಿಸುವಂತೆ ಅರ್ಜಿಯು ನ್ಯಾಯಾಲಯವನ್ನು ಕೋರಿದೆ.

ಅರ್ಜಿದಾರರು ಸಂವಿಧಾನದ 348ನೇ ವಿಧಿಯನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸಂಸತ್ತಿನಲ್ಲಿ ಅಥವಾ ರಾಜ್ಯ ಶಾಸಕಾಂಗಗಳಲ್ಲಿ ಮಂಡಿಸಬೇಕಾದ ಎಲ್ಲ ಮಸೂದೆಗಳು ಅಥವಾ ತಿದ್ದುಪಡಿಗಳ ಅಧಿಕೃತ ಪಠ್ಯಗಳು,ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರು ಅಂಗೀಕರಿಸಿದ ಎಲ್ಲ ಸುಗ್ರೀವಾಜ್ಞೆಗಳು ಇಂಗ್ಲಿಷ್ ಭಾಷೆಯಲ್ಲಿರಬೇಕು ಎಂದು ಈ ವಿಧಿಯು ಹೇಳುತ್ತದೆ. ಕಾಯ್ದೆಯ ನಾಮಕರಣವು ಕಾನೂನಿನ ಭಾಗವಾಗಿದೆ ಎಂದು ಅರ್ಜಿದಾರರು ಒತ್ತಿ ಹೇಳಿದ್ದಾರೆ.

ದೇಶದಲ್ಲಿಯ ವಿವಿಧ ಭಾಷಾ ಗುಂಪುಗಳಲ್ಲಿ ಇಂಗ್ಲಿಷ್ ಭಾಷೆಯ ವ್ಯಾಪಕ ಬಳಕೆ ಮತ್ತು ಸ್ವೀಕಾರ ಹಾಗೂ ತನ್ಮೂಲಕ ದೇಶದ ವಿವಿಧ ಗುಂಪುಗಳ ನಡುವೆ ಸಂಪರ್ಕ,ಏಕತೆ ಮತ್ತು ತಿಳುವಳಿಕೆಯನ್ನು ಉತ್ತೇಜಿಸುವುದು ವಿಧಿ 348ರ ಉದ್ದೇಶಗಳಲ್ಲೊಂದಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಕೇಂದ್ರ ಸರಕಾರದ ಕ್ರಮವು ‘ಭಾಷಾ ಸಾಮ್ರಾಜ್ಯಶಾಹಿ ’ ಎಂದು ಬಣ್ಣಿಸಿರುವ ಅರ್ಜಿಯು,ಯಾವುದೇ ಒಂದು ಭಾಷೆಯ ಪ್ರಾಬಲ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಭಾಷೆ ಆಧಾರಿತ ಉದ್ವಿಗ್ನತೆಗಳಿಗೆ ಕಾರಣವಾಗುತ್ತದೆ ಮತ್ತು ದೇಶದ ಏಕತೆಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಪ್ರತಿಪಾದಿಸಿದೆ.

ಭಾರತದ ಒಟ್ಟು ಜನಸಂಖ್ಯೆಯ ಕೇವಲ ಶೇ.41ರಷ್ಟು ಜನರು ಹಿಂದಿ ಮಾತನಾಡುತ್ತಾರೆ. ದಕ್ಷಿಣ ಭಾರತದ ಹೆಚ್ಚಿನ ವಕೀಲರಿಗೆ ಹಿಂದಿ ಅರ್ಥವಾಗುವುದಿಲ್ಲ. ನೂತನ ಕಾನೂನುಗಳ ಹೆಸರುಗಳು ಹಿಂದಿಯೇತರ ಮತ್ತು ಸಂಸ್ಕೃತೇತರ ಭಾಷಿಕರ ಕಾನೂನು ಸಮುದಾಯಕ್ಕೆ ಗೊಂದಲ, ಸಂದಿಗ್ಧತೆ ಮತ್ತು ತೊಂದರೆಯನ್ನು ಸೃಷ್ಟಿಸಬಹುದು. ಅಲ್ಲದೆ ಈ ಹೆಸರುಗಳು ಹಿಂದಿಯೇತರ ಮತ್ತು ಸಂಸ್ಕೃತೇತರ ಭಾಷಿಕರಿಗೆ ಉಚ್ಚರಿಸಲು ಕಷ್ಟವಾಗಿವೆ. ಆದ್ದರಿಂದ ಇದು ಸಂವಿಧಾನದ ವಿಧಿ 19(1)(ಜಿ) ಅಡಿ ಒದಗಿಸಲಾಗಿರುವ ಉದ್ಯೋಗದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News