ಗಗನಯಾನ ಅಭಿಯಾನ: ಅ.21: ಇಸ್ರೋದಿಂದ ಕ್ರೂ ಎಸ್ಕೇಪ್ ಸಿಸ್ಟಮ್ ನ ಮಾನವರಹಿತ ಹಾರಾಟ ಪರೀಕ್ಷೆ

Update: 2023-10-16 16:26 GMT

ಹೊಸದಿಲ್ಲಿ: ಗಗನಯಾನ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾನವರಹಿತ ಹಾರಾಟ ಪರೀಕ್ಷೆಯನ್ನು ಅ.21ರಂದು ನಡೆಸುವುದಾಗಿ ಇಸ್ರೋ ಸೋಮವಾರ ಪ್ರಕಟಿಸಿದೆ.

ಗಗನಯಾನ ಅಭಿಯಾನ ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನವಾಗಲಿದೆ. ನೈಜ ಅಭಿಯಾನಕ್ಕೆ ಹಸಿರು ನಿಶಾನೆಯನ್ನು ತೋರಿಸುವುದಕ್ಕೆ ಮುನ್ನ ರಾಕೆಟ್ ಮತ್ತು ಅಂತರಿಕ್ಷ ನೌಕೆಯ ಸರಣಿ ಪರೀಕ್ಷೆಗಳು ನಡೆಯಲಿವೆ. ಅಭಿಯಾನ 2024ರಲ್ಲಿ ನಡೆಯುವ ನಿರೀಕ್ಷೆಯಿದೆ, ಆದರೆ ಮುಹೂರ್ತವಿನ್ನೂ ನಿಗದಿಗೊಂಡಿಲ್ಲ.

‘ಕ್ರೂ ಎಸ್ಕೇಪ್ ಸಿಸ್ಟಮ್ (ಸಿಇಎಸ್)ನ ಸಾಧನೆಯನ್ನು ಪ್ರದರ್ಶಿಸಲಿರುವ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1(ಟಿವಿ-ಡಿ1)ಗಾಗಿ ಸಿದ್ಧತೆಗಳು ನಡೆಯುತ್ತಿವೆ. ಟಿವಿ-ಡಿ1ರ ಪರೀಕ್ಷಾರ್ಥ ಹಾರಾಟವು ಅ.21ರಂದು ಬೆಳಿಗ್ಗೆ ಏಳರಿಂದ ಒಂಭತ್ತು ಗಂಟೆಯ ನಡುವೆ ಶ್ರೀಹರಿಕೋಟಾದಿಂದ ನಡೆಯಲಿದೆ ’ಎಂದು ಇಸ್ರೋ ಟ್ವೀಟಿಸಿದೆ.

ಸಿಇಎಸ್ ಯಾವುದೇ ತುರ್ತು ಸಂದರ್ಭಗಳಿಂದಾಗಿ ಬಾಹ್ಯಾಕಾಶ ಯಾನವು ವಿಫಲಗೊಂಡರೆ ಅಂತರಿಕ್ಷ ನೌಕೆಯಲ್ಲಿನ ಕ್ರೂ ಮಾಡ್ಯೂಲ್ ನಿಂದ ಯಾನಿಗಳನ್ನು ಸುರಕ್ಷಿತವಾಗಿ ಪಾರು ಮಾಡುವ ವ್ಯವಸ್ಥೆಯಾಗಿದೆ. ಸಿಇಎಸ್ ಮೂಲಕ ಹೊರಕ್ಕೆ ತಳ್ಳಲ್ಪಡುವ ಬಾಹ್ಯಾಕಾಶ ಯಾನಿಗಳನ್ನು ಭೂಮಿಯನ್ನು ತಲುಪಿದ ಬಳಿಕ ಸುರಕ್ಷಿತವಾಗಿ ಹೊರತೆಗೆಯಲಾಗುವುದು. ಕ್ರೂ ಮಾಡ್ಯೂಲ್ ಅಂತರಿಕ್ಷ ನೌಕೆಯಲ್ಲಿ ಯಾನಿಗಳು ವಾಸವಾಗಿರುವ ಭಾಗವಾಗಿದ್ದು, ಒತ್ತಡಕ್ಕೊಳಗಾದ ಲೋಹೀಯ ರಚನೆಯಾಗಿರುವ ಅದರೊಳಗೆ ಭೂಮಿಯಲ್ಲಿನ ವಾತಾವರಣವನ್ನು ಸೃಷ್ಟಿಸಲಾಗಿರುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರು 2018ರಲ್ಲಿ ಗಗನಯಾನ ಕಾರ್ಯಕ್ರಮವನ್ನು ಪ್ರಕಟಿಸಿದ್ದು,ನಿಗದಿಯಂತೆ 2022ರಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದಿಂದಾಗಿ ,ಮುಂದಿನ ವರ್ಷ ನಡೆಯುವ ನಿರೀಕ್ಷೆಯಿದೆ.

ಭಾರತವು ತನ್ನ ಮಹತ್ವಾಕಾಂಕ್ಷೆಯ ಗಗನಯಾನ ಅಭಿಯಾನಕ್ಕಾಗಿ ಭಾರತೀಯ ವಾಯುಪಡೆಯ ನಾಲ್ವರು ಪೈಲಟ್ ಗಳನ್ನು ಆಯ್ಕೆ ಮಾಡಿದೆ. ರಶ್ಯಾದಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿರುವ ಅವರು ಪ್ರಸ್ತುತ ಭಾರತದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News