‘ಇಂಡಿಯಾʻದಿಂದ ಅನ್ಯಾಯದ ವಿರುದ್ಧ ಸಂಯುಕ್ತ ಹೋರಾಟ ; ಪಶ್ಚಿಮ ಬಂಗಾಳದಲ್ಲಿ ರಾಹುಲ್ ಘೋಷಣೆ
ಕೋಲ್ಕತಾ : ಪ್ರತಿಪಕ್ಷ ಒಕ್ಕೂಟ ‘ಇಂಡಿಯಾ’ವು ‘‘ಅನ್ಯಾಯ’’ದ ವಿರುದ್ಧ ಜೊತೆಯಾಗಿ ಹೋರಾಡುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ಭಾರತ್ ಜೋಡೊ ನ್ಯಾಯ ಯಾತ್ರೆಯು ಗುರುವಾರ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಹೊಂದಾಣಿಕೆಯಿಲ್ಲ ಎಂಬುದಾಗಿ ತೃಣಮೂಲ ಕಾಂಗ್ರೆಸ್ ಪಕ್ಷವು ಘೋಷಿಸಿದ ಒಂದು ದಿನದ ಬಳಿಕ ಅವರ ಯಾತ್ರೆಯು ರಾಜ್ಯವನ್ನು ಪ್ರವೇಶಿಸಿದೆ.
‘‘ಪಶ್ಚಿಮ ಬಂಗಾಳಕ್ಕೆ ಬಂದಿರುವುದಕ್ಕೆ ನನಗೆ ಸಂತೋಷವಾಗಿದೆ. ನಿಮ್ಮ ಮಾತುಗಳನ್ನು ಕೇಳಲು ಮತ್ತು ನಿಮ್ಮೊಂದಿಗೆ ನಿಲ್ಲಲು ನಾವು ಇಲ್ಲಿಗೆ ಬಂದಿದ್ದೇವೆ. ಬಿಜೆಪಿ-ಆರೆಸ್ಸೆಸ್ ದ್ವೇಷ, ಹಿಂಸೆ ಮತ್ತು ಅನ್ಯಾಯವನ್ನು ಹರಡುತ್ತಿದೆ. ಹಾಗಾಗಿ, ಇಂಡಿಯಾ ಒಕ್ಕೂಟವು ‘ಅನ್ಯಾಯ’ದ ವಿರುದ್ಧ ಜೊತೆಯಾಗಿ ಹೋರಾಡುವುದು’’ ಎಂದು ಅವರು ಹೇಳಿದರು.
ನಾನು ಹಾಗೂ ನನ್ನ ಪಕ್ಷವು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯೊಂದಿಗೆ ‘‘ಅತ್ಯುತ್ತಮ ವೈಯಕ್ತಿಕ ಬಾಂಧವ್ಯ’’ವನ್ನು ಹೊಂದಿದ್ದೇವೆ ಎಂದು ಇದಕ್ಕೂ ಮುನ್ನ ರಾಹುಲ್ ಗಾಂಧಿ ಹೇಳಿದ್ದರು. ಯಾವುದೇ ಬಣದ ಕಠಿಣ ಮಾತುಗಳು ಮುಂಬರುವ ಲೋಕಸಭಾ ಚುನಾವಣೆಯ ಸ್ಥಾನ ಹೊಂದಾಣಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದಾಗಿಯೂ ಅವರು ಅಭಿಪ್ರಾಯಪಟ್ಟಿದ್ದರು.
ಮಮತಾ ಬ್ಯಾನರ್ಜಿ ‘ಇಂಡಿಯಾ’ ಒಕ್ಕೂಟದ ಅತ್ಯಂತ ಮಹತ್ವದ ಭಾಗವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಗುರುವಾರ ಪುನರುಚ್ಚರಿಸಿದರು.
‘‘ಟಿ ಎಂ ಸಿ ಯು 28 ಪಕ್ಷಗಳನ್ನು ಒಳಗೊಂಡಿರುವ ‘ಇಂಡಿಯಾ’ ಒಕ್ಕೂಟದ ಅತ್ಯಂತ ಪ್ರಮುಖ ಕಂಬವಾಗಿದೆ. ಮಮತಾ ಬ್ಯಾನರ್ಜಿಯು ದೇಶದ ಅನುಭವಿ ಹಾಗೂ ಪ್ರಭಾವಿ ನಾಯಕಿಯಾಗಿದ್ದಾರೆ. ನಾವು ಅವರನ್ನು ಗೌರವಿಸುತ್ತೇವೆ. ನಮ್ಮ ದೇಶದ ರಾಜಕೀಯದಲ್ಲಿ ಅವರು ವಿಶೇಷ ಸ್ಥಾನ ಮತ್ತು ಗುರುತನ್ನು ಹೊಂದಿದ್ದಾರೆ ಎನ್ನುವುದನ್ನು ಪ್ರತಿಯೊಬ್ಬರೂ ತಿಳಿದಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ಭಾರತ್ ಜೋಡೊ ನ್ಯಾಯ ಯಾತ್ರೆಯು 12ನೇ ದಿನವಾದ ಗುರುವಾರ ಬೆಳಗ್ಗೆ ಅಸ್ಸಾಮ್ ನಿಂದ ಪಶ್ಚಿಮ ಬಂಗಾಳಕ್ಕೆ ಕಾಲಿರಿಸಿತು. ಅಸ್ಸಾಮ್ ಕಾಂಗ್ರೆಸ್ ಮುಖ್ಯಸ್ಥೆ ಆಂಗಿಕಾ ದತ್ತ ಪಕ್ಷದ ಧ್ವಜವನ್ನು ಪಕ್ಷದ ಪಶ್ಚಿಮ ಬಂಗಾಳ ಘಟಕದ ಮುಖ್ಯಸ್ಥ ಅಧೀರ್ ರಂಜನ್ ಚೌಧರಿಗೆ ಹಸ್ತಾಂತರಿಸಿದರು.
ಈ ನಡುವೆ, ರಾಹುಲ್ ಯಾತ್ರೆಯ ಹಾದಿಯಲ್ಲಿ ಹಲವು ಟಿಎಂಸಿ ಬೆಂಬಲಿಗರು ‘‘ಬಂಗಾಳಕ್ಕೆ ದೀದಿ ಸಾಕು’’ ಎಂದು ಹೇಳುವ ಫಲಕಗಳನ್ನು ಪ್ರದರ್ಶಿಸಿದರು.
ಯಾತ್ರೆಯು ಗೋಲಕ್ಗಂಜ್ ಮೂಲಕ ಸಾಗಿ ಕೋಚ್ಬೆಹಾರ್ ತಲುಪಿತು.