2001ರ ಪ್ರತಿಭಟನೆ ಪ್ರಕರಣದಲ್ಲಿ ವಿಚಾರಣೆಗೆ ಗೈರು: ಆಪ್ ಸಂಸದ ಸಂಜಯ್ ಸಿಂಗ್ ಬಂಧನಕ್ಕೆ ನ್ಯಾಯಾಲಯದ ಆದೇಶ

Update: 2024-08-21 07:59 GMT

ಸಂಜಯ್ ಸಿಂಗ್ (PTI)

ಲಕ್ನೊ : 2001 ರಲ್ಲಿ ನಡೆದಿದ್ದ ಪ್ರತಿಭಟನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಸಂಸದ ಸಂಜಯ್ ಸಿಂಗ್ ವಿಚಾರಣೆಗೆ ಗೈರು ಹಾಜರಾಗುತ್ತಿರುವುದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ, ಉತ್ತರ ಪ್ರದೇಶದ ಸುಲ್ತಾನ್‌ಪುರದ ನ್ಯಾಯಾಲಯವು ಮಂಗಳವಾರ ಸಂಜಯ್ ಸಿಂಗ್ ಮತ್ತು ಇತರ ಐವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಪ್ರಕರಣವು ಜೂನ್ 19, 2001 ರಂದು ಸಮಾಜವಾದಿ ಪಕ್ಷದ ಮಾಜಿ ಶಾಸಕ ಅನೂಪ್ ಸಂದಾ ನೇತೃತ್ವದಲ್ಲಿ ವಿದ್ಯುತ್ ಕಳಪೆ ಪೂರೈಕೆಯ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದೆ. ಮಾಜಿ ಕೌನ್ಸಿಲರ್‌ಗಳಾದ ಕಮಲ್ ಶ್ರೀವಾಸ್ತವ್, ವಿಜಯ್ ಕುಮಾರ್, ಸಂತೋಷ್ ಮತ್ತು ಸುಭಾಷ್ ಚೌಧರಿ ಅವರೊಂದಿಗೆ ಸಂಜಯ್ ಸಿಂಗ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ಆರು ಮಂದಿಯ ವಿರುದ್ಧ ಕೊತ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜನವರಿ 11, 2023 ರಂದು, ವಿಶೇಷ ಮ್ಯಾಜಿಸ್ಟ್ರೇಟ್ ಯೋಗೇಶ್ ಯಾದವ್ ಸಂಜಯ್ ಸಿಂಗ್ ಸಹಿತ ಇತರ ಐವರು ತಪ್ಪಿತಸ್ಥರೆಂದು ತೀರ್ಪು ನೀಡಿ, ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ್ದರು.

ಆಗಸ್ಟ್ 9 ರಂದು, ವಿಶೇಷ ಮ್ಯಾಜಿಸ್ಟ್ರೇಟ್ ಶುಭಂ ವರ್ಮಾ ಅವರು ಜನಪ್ರತಿನಿಧಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆರು ಮಂದಿಗೆ ಆದೇಶ ನೀಡಿದ್ದರು. ಅವರು ಹಾಜರಾಗಲು ವಿಫಲರಾದಾಗ ಆಗಸ್ಟ್ 13 ರಂದು, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಯಿತು ಮತ್ತು ಮಂಗಳವಾರ ಆಗಸ್ಟ್ 20ಕ್ಕೆ ವಿಚಾರಣೆ ನಿಗದಿಪಡಿಸಲಾಗಿತ್ತು ಎಂದು ಪಿಟಿಐ ವರದಿ ಮಾಡಿದೆ.

ಸಂಜಯ್ ಸಿಂಗ್ ಮತ್ತು ಸಂದಾ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ ಎಂದು ಅವರನ್ನು ಪ್ರತಿನಿಧಿಸುತ್ತಿರುವ ವಕೀಲ ಮದನ್ ಸಿಂಗ್ ಹೇಳಿದರು. ಆಗಸ್ಟ್ 22 ಕ್ಕೆ ವಿಚಾರಣೆಯನ್ನು ಪಟ್ಟಿ ಮಾಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಆದರೂ ವಿಶೇಷ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಬಂಧಿಸಿ ಆಗಸ್ಟ್ 28 ರೊಳಗೆ ತನ್ನ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News