ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಬಿಜೆಪಿಯ ಮಾಜಿ ಶಾಸಕ ಉದಯಭನ್‌ಗೆ ಕ್ಷಮಾದಾನ ನೀಡಿದ ಉತ್ತರ ಪ್ರದೇಶ ರಾಜ್ಯಪಾಲೆ

Update: 2024-07-26 07:23 GMT

Photo credit: PTI

ಲಕ್ನೋ: ಸಮಾಜವಾದಿ ಪಕ್ಷದ ಶಾಸಕ ಜವಾಹರ್‌ ಯಾದವ್‌ ಅವರ ಕೊಲೆ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯದಿಂದ ಘೋಷಿತರಾಗಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಬಿಜೆಪಿಯ ಮಾಜಿ ಶಾಸಕ ಉದಯಭನ್‌ ಕರ್ವಾರಿಯಾ ಅವರಿಗೆ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಅವರು ಕ್ಷಮಾದಾನ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಜುಲೈ 25ರಂದು ಬಿಡುಗಡೆಗೊಳಿಸಲಾಗಿದೆ.

ಸಂವಿಧಾನದ ವಿಧಿ 161 ಅನ್ವಯ ಪ್ರದತ್ತವಾದ ಅಧಿಕಾರಗಳನ್ನು ಬಳಸಿಕೊಂಡು ರಾಜ್ಯಪಾಲೆ ಕರ್ವಾರಿಯಾ ಅವರ ಬಿಡುಗಡೆಗೆ ರಾಜ್ಯ ಸರಕಾರದ ಶಿಫಾರಸಿನ ಮೇರೆಗೆ ಆದೇಶಿಸಿದರು.

ಜೈಲಿನಲ್ಲಿರುವಾಗ ಸನ್ನಡತೆಯ ಕಾರಣ ನೀಡಿ ಕರ್ವಾರಿಯಾ ಅವರ ಬಿಡುಗಡೆಗೆ ಈ ಹಿಂದೆ ಪ್ರಯಾಗರಾಜ್‌ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಶಿಫಾರಸು ಮಾಡಿದ್ದರು.

ಪ್ರಯಾಗರಾಜ್‌ನಲ್ಲಿ ಆಗಸ್ಟ್‌ 1996ರಲ್ಲಿ ಜವಾಹರ್‌ ಯಾದವ್‌ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲಿ ಕರ್ವಾರಿಯಾ ಅವರಿಗೆ ನವೆಂಬರ್‌ 4, 2019ರಲ್ಲಿ ಜೀವಾವಧಿ ಶಿಕ್ಷೆ ಘೋಷಿಸಲಾಗಿತ್ತು. ಯಾದವ್‌ ಅವರ ಪತ್ನಿ ವಿಜ್ಮಾ ಯಾದವ್‌ ಪ್ರತಾಪ್ಪುರ್‌ ಕ್ಷೇತ್ರದ ಶಾಸಕಿಯಾಗಿದ್ದು ಕರ್ವಾರಿಯಾ ಅವರ ಬಿಡುಗಡೆ ಸರಿಯಾದ ಕ್ರಮವಲ್ಲ ಎಂದು ಹೇಳಿ ಅದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ವಿಜ್ಮಾ ಯಾದವ್‌ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News