ಯುಪಿಎ ಸರಕಾರ ತೋಡಿದ ಗುಂಡಿಗಳನ್ನು ಮುಚ್ಚುವುದರಲ್ಲಿಯೇ 10 ವರ್ಷ ಕಳೆಯಿತು : ಅಮಿತ್ ಶಾ

Update: 2024-04-19 15:55 GMT

 ಅಮಿತ್ ಶಾ | PC : PTI 

ಹೊಸದಿಲ್ಲಿ : ‘‘ ಈ ಚುನಾವಣೆಯು ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿ ಮಾಡುವುದರ ಕುರಿತಾದುದಾಗಿದೆ. ಮೋದಿಜೀಯವರು 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ರೂಪಿಸುವ ಹಾಗೂ ಎಲ್ಲಾ ವಲಯಗಳಲ್ಲೂ ನಂ. 1 ಆಗಿ ಮಾಡುವ ದೃಢಸಂಕಲ್ಪವನ್ನು ಹೊಂದಿದ್ದಾರೆ. ಅದನ್ನು ಸಾಧಿಸಲು ಮುಂದಿನ ಐದು ವರ್ಷಗಳು ನಿರ್ಣಾಯಕವಾದುದಾಗಿವೆ. ಯಾಕೆಂದರೆ ಕಳೆದ ಹತ್ತು ವರ್ಷಗಳು ಹಿಂದಿನ ಯುಪಿಎ ಸರಕಾರವು ತೋಡಿದ ಗುಂಡಿಗಳನ್ನು ಮುಚ್ಚುವುದರಲ್ಲಿಯೇ ಕಳೆದು ಹೋದವು” ಎಂದು ಅಮಿತ್ ಶಾ ಹೇಳಿದರು.

ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಈ ಚುನಾವಣೆಯು ಪ್ರಧಾನಿ ಮೋದಿಯವರನ್ನು ಮೂರನೇ ಅವಧಿಗೆ ಅಧಿಕಾರಕ್ಕೇರಿಸುವ ಕುರಿತಾದುದಾಗಿದೆ. ಆ ಮೂಲಕ ಅವರು 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡಲಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿಯವರ ಮೂರನೇ ಅವಧಿಯು ನಿರ್ಣಾಯಕವಾದುದಾಗಿದೆ. ಯಾಕೆಂದರೆ ಮೊದಲ ಎರಡು ಅವಧಿಗಳು, ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಎಸಗಿದ ಪ್ರಮಾದಗಳನ್ನು ಸರಿಪಡಿಸುವುದರಲ್ಲಿಯೇ ಕಳೆದು ಹೋದವು. ವಿಕಸಿತ ಭಾರತದ ನಿರ್ಮಾಣಕ್ಕೆ ಬಲಿಷ್ಠವಾದ ತಳಹದಿಯನ್ನು ಸೃಷ್ಟಿಸಲು ಮುಂದಿನ ಐದು ವರ್ಷಗಳನ್ನು ಬಳಸಿಕೊಳ್ಳಲಾಗುವುದು ಎಂದರು.

ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ. ಅಡ್ವಾಣಿಯವರಂತಹ ರಾಜಕೀಯ ದಿಗ್ಗಜರು ಪ್ರತಿನಿಧಿಸಿದ್ದ ಈ ಕ್ಷೇತ್ರದಲ್ಲಿ ಮತ್ತೆ ತನ್ನನ್ನು ಸ್ಪರ್ಧೆಗಿಳಿಸಿದ್ದಕ್ಕಾಗಿ ಅಮಿತ್ ಶಾ ಅವರು ಬಿಜೆಪಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಪ್ರಧಾನಿ ಮೋದಿಯವರು ಈ ಕ್ಷೇತ್ರದ ನೋಂದಾಯಿತ ಮತದಾರರಾಗಿರುವುದರಿಂದ ಈ ಸ್ಥಾನವು ಹೆಚ್ಚಿನ ಮಹತ್ವವನ್ನು ಪಡೆದಿದೆ ಎಂದರು.

ಗಾಂಧಿನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂಕೆ. ದವೆ ಅವರಿಗೆ ಶಾ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಹಿಂದೂ ಪಂಚಾಂಗದಲ್ಲಿ ‘ವಿಜಯ ಮುಹೂರ್ತ’ ವೆಂದು ಪರಿಗಣಿಸಲಾದ ಮಧ್ಯಾಹ್ನ 12.39ರ ವೇಳೆಗೆ ಅವರು ನಾಮಪತ್ರ ಸಲ್ಲಿಸಿದರು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜೊತೆಗಿದ್ದರು.

ಶಾ ಅವರು ಗಾಂಧಿ ನಗರದಲ್ಲಿ ಗುರುವಾರ ಒಂದರ ಬೆನ್ನಿಗೆ ಒಂದರಂತೆ ಮೂರು ರೋಡ್ ಶೋಗಳನ್ನು ನಡೆಸಿ ಮತಯಾಚನೆ ನಡೆಸಿದರು.

ಗುಜರಾತಿನ ಎಲ್ಲಾ 26 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News