ಉತ್ತರಪ್ರದೇಶ: ನಿರ್ಮಾಣ ಹಂತದ ಚರ್ಚ್ ಧ್ವಂಸ ಪ್ರಕರಣ; ಹಿಂದುತ್ವ ನಾಯಕರ ವಿರುದ್ಧ ಎಫ್ಐಆರ್

Update: 2023-06-26 17:32 GMT

ಕಾನ್ಪುರ: ಇಲ್ಲಿಗೆ ಸಮೀಪದ ಶಹಜಾದ್ಪುರ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಚರ್ಚ್ ನ ಗೋಡೆಯನ್ನು ನೆಲಸಮಗೊಳಿಸಿ, ದಾಂಧಲೆಯನ್ನು ನಡೆಸಿದ್ದಕ್ಕಾಗಿ ಬಜರಂಗ ದಳ ಮತ್ತು ವಿಹಿಂಪ ಸೇರಿದಂತೆ ಹಿಂದುತ್ವ ಸಂಘಟನೆಗಳ ಪದಾಧಿಕಾರಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಬಪಲಂಥೀಯ ಸಂಘಟನೆಗಳ ನಾಯಕರು ಶನಿವಾರ ಹೊಸದಾಗಿ ನಿರ್ಮಾಣಗೊಂಡಿದ್ದ ಗೋಡೆಯನ್ನು ಕೆಡವಿದ್ದಾರೆ, ಅಲ್ಲಿದ್ದ ಪೀಠೋಪಕರಣಗಳು ಮತ್ತು ಇತರ ಮೂಲಸೌಕರ್ಯಗಳಿಗೆ ಹಾನಿಯನ್ನುಂಟು ಮಾಡಿದ್ದಾರೆ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.

ಬಜರಂಗ ದಳದ ಜಿಲ್ಲಾ ಸಂಚಾಲಕ ಸೇರಿದಂತೆ 13 ಜನರನ್ನು ಎಫ್ಐಆರ್ ನಲ್ಲಿ ಹೆಸರಿಸಲಾಗಿದೆ, ಜೊತೆಗೆ 70-80 ಅಪರಿಚಿತರನ್ನು ಸೇರಿಸಲಾಗಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದರು.

ಕಾನ್ಪುರ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತದ ಪೂರ್ವಾನುಮತಿ ಪಡೆದುಕೊಳ್ಳದೆ ಮಿಶನರಿ ಶಾಲೆಯ ಬಳಿ ಚರ್ಚ್ ಅನ್ನು ನಿರ್ಮಿಸಲಾಗುತ್ತಿತ್ತು ಮತ್ತು ಇದನ್ನು ನಿಲ್ಲಿಸಲು ಸ್ಥಳೀಯಾಡಳಿತವು ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ ಎಂದು ಬಜರಂಗ ದಳದ ನಾಯಕರೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಪ್ರತಿಭಟನಾಕಾರರು ತಹಶೀಲ್ದಾರ್ ಸೇರಿದಂತೆ ಸರಕಾರಿ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ನಿವೇಶನದಲ್ಲಿ ಕೇಸರಿ ಧ್ವಜಗಳನ್ನು ಹಾರಿಸಿದ್ದರು, ಚರ್ಚ್ ನ ಗೋಡೆಗಳ ಮೇಲೆ ‘ಜೈ ಶ್ರೀರಾಮ ಎಂದು ಬರೆದಿದ್ದರು, ಸಿಸಿಟಿವಿ ಕ್ಯಾಮರಾಗಳನ್ನು ಮತ್ತು ಅಲ್ಲಿದ್ದ ಪ್ರತಿಮೆಗಳನ್ನು ಹಾನಿಗೊಳಿಸಿದ್ದರು ಎಂದು ಪೋಲಿಸರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News