2007ರ ಪ್ರಕರಣ ಉಲ್ಲೇಖಿಸಿ ಕೇಜ್ರಿವಾಲ್ ಆಪ್ತ ಸಹಾಯಕನನ್ನು ಸೇವೆಯಿಂದ ಅಮಾನತುಗೊಳಿಸಿದ ವಿಜಿಲೆನ್ಸ್ ಇಲಾಖೆ
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಈಡಿಯಿಂದ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪದ ಕುರಿತಾದ 2007ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರನ್ನು ಅಮಾನತುಗೊಳಿಸುವ ನಿರ್ಧಾರವನ್ನು ವಿಜಿಲೆನ್ಸ್ ಇಲಾಖೆಯ ಮಹಾನಿರ್ದೇಶನಾಲಯ ಕೈಗೊಂಡಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಲಾಗಿದೆ. ಕುಮಾರ್ ಅವರು ಹೊಂದಿರುವ ಕಾನೂನು ಪ್ರಕರಣಗಳು ಮತ್ತು ಅವರ ನೇಮಕಾತಿಯಲ್ಲಿ ಸೂಕ್ತ ಪ್ರಕ್ರಿಯೆಗಳನ್ನು ಪಾಲಿಸದೇ ಇರುವುದನ್ನು ಪರಿಗಣನೆಗೆ ತೆಗೆದುಕೊಂಡು ಅಮಾನತುಗೊಳಿಸಲಾಗಿದೆ ಎಂದು ವಿಜಿಲೆನ್ಸ್ ಇಲಾಖೆ ಹೇಳಿದೆ.
2007ರಲ್ಲಿ ನೊಯಿಡಾ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕರ್ತವ್ಯದಲ್ಲಿದ್ದ ಮಹೇಶ್ ಪಾಲ್ ಎಂಬವರು ದಾಖಲಿಸಿದ್ದ ದೂರಿನಲ್ಲಿ ಸರ್ಕಾರಿ ಉದ್ಯೋಗಿಯಾಗಿರುವ ತನ್ನ ಕರ್ತವ್ಯಕ್ಕೆ ಬಿಭವ್ ಕುಮಾರ್ ಮತ್ತು ಇತರರು ಅಡ್ಡಿಪಡಿಸಿದ್ದಾರೆ ಹಾಗೂ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಿದ್ದರು.
ಈ ಪ್ರಕರಣದಲ್ಲಿ ಅವರನ್ನು ಬಂಧಿಸದೇ ಇದ್ದರೂ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ. ಅವರ ನೇಮಕಾತಿ ವೇಳೆ ಅವರ ಬಾಕಿ ಕ್ರಿಮಿನಲ್ ಪ್ರಕರಣಗಳನ್ನು ಪರಿಶೀಲಿಸಲಾಗಿಲ್ಲ ಎಂದೂ ವಿಜಿಲೆನ್ಸ್ ಇಲಾಖೆ ಹೇಳಿದೆ.
ಎಪ್ರಿಲ್ 8ರಂದು ಜಾರಿ ನಿರ್ದೇಶನಾಲಯವು ಬಿಭವ್ ಕುಮಾರ್ ಅವರನ್ನು ದಿಲ್ಲಿ ಅಬಕಾರಿ ನೀತಿ ಪ್ರಕರಣ ಸಂಬಂಧಿಸಿದಂತೆ ವಿಚಾರಣೆ ನಡೆಸಿತ್ತು.