ಚಂದ್ರನ ಮೇಲೆ ಇಳಿದ ವಿಕ್ರಮ್ ಲ್ಯಾಂಡರ್; ಇನ್ನು 14 ದಿನ ‘ಪ್ರಜ್ಞಾನ’ನ ಕಾರುಬಾರು!
ಬೆಂಗಳೂರು: ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ವೇಳೆ ಭಾರೀ ಧೂಳೆದ್ದಿತು. ಧೂಳು ಚದುರಿದ ಬಳಿಕವಷ್ಟೇ ವ್ರಿಕಮ ಲ್ಯಾಂಡರ್‌ನಿಂದ ‘ಪ್ರಜ್ಞಾನ್’ ರೋವರ್ ಹೊರಗೆ ಬರಲಿದೆ. ಭೂಮಿಯಂತೆ, ಚಂದ್ರನಲ್ಲಿ ಧೂಳು ನೆಲ ಸೇರುವುದಿಲ್ಲ. ಯಾಕೆಂದರೆ, ಚಂದ್ರನ ಮೇಲಿನ ಗುರುತ್ವಾಕರ್ಷಣೆಯ ಸೆಳೆತ ಕಡಿಮೆ. ಹಾಗಾಗಿ ಧೂಳು ನಿಧಾನವಾಗಿ ಚದುರಬೇಕು. ಇದಕ್ಕೆ ಸುಮಾರು ಮೂರೂವರೆ ಗಂಟೆಗಳು ಬೇಕಾಗಬಹುದು. ‘ಪ್ರಜ್ಞಾನ್’ ರೋವರ್‌ಗೆ ಧೂಳಿನಿಂದ ಹಾನಿಯಾಗುವುದನ್ನು ತಪ್ಪಿಸುವುದಕ್ಕಾಗಿ ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಧೂಳು ಪ್ರಜ್ಞಾನ್ ರೋವರ್‌ನ ಕ್ಯಾಮೆರಗಳು ಮತ್ತು ಇತರ ಸೂಕ್ಷ್ಮ ಉಪಕರಣಗಳಿಗೆ ಮೆತ್ತಿಕೊಂಡರೆ ಅವುಗಳ ನಿರ್ವಹಣೆಯು ಕಳೆಗುಂದಬಹುದು ಎಂಬ ಭೀತಿಯಿದೆ.
‘ಪ್ರಜ್ಞಾನ’ ರೋವರ್ (ನಾಲ್ಕು ಚಕ್ರಗಳನ್ನು ಒಳಗೊಂಡ ಯಂತ್ರ) ಹೊರ ಬಂದ ಬಳಿಕ, ಮುಂದಿನ 14 ದಿನಗಳ ಕಾಲ (ಭೂಮಿಯ 14 ದಿನಗಳು ಚಂದ್ರನ ಒಂದು ದಿನಕ್ಕೆ ಸಮ) ಚಂದ್ರನ ಮೇಲೆ ಓಡಾಡಿ ಮೇಲ್ಮೈಯ ಚಿತ್ರಗಳು ಮತ್ತು ದತ್ತಾಂಶಗಳನ್ನು ಕಳುಹಿಸಲಿದೆ. 14 ದಿನಗಳ ಬಳಿಕ, ಅದರ ಚಟುವಟಿಕೆಗಳು ನಿಧಾನಗೊಳ್ಳುವ ಸಾಧ್ಯತೆಯಿದೆ. ಯಾಕೆಂದರೆ ಪ್ರಜ್ಞಾನ್ ಕಾರ್ಯಾಚರಿಸುವುದು ಸೌರ ಶಕ್ತಿಯಿಂದ. ಆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯನ ಬಿಸಿಲು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಅಥವಾ ಕೆಲವು ಸ್ಥಳಗಳನ್ನು ಬಿಸಿಲು ಸ್ಪರ್ಶಿಸುವುದೇ ಇಲ್ಲ.
ರೋವರ್ ಪ್ರಜ್ಞಾನ್ ವಿಕ್ರಮ ಲ್ಯಾಂಡರ್‌ನಿಂದ ಹೊರಬಂದ ಕೂಡಲೇ ತನ್ನ ಸೌರ ಫಲಕಗಳನ್ನು ಹೊರಚಾಚುತ್ತದೆ. ಬಳಿಕ ಅದು ಚಲಿಸಲು ಆರಂಭಿಸುತ್ತದೆ. ಈ ಹಂತದಲ್ಲಿ ತಂತಿಯೊಂದರ ಮೂಲಕ ಅದು ವಿಕ್ರಮ್ ಲ್ಯಾಂಡರ್ ಜೊತೆಗೆ ಸಂಪರ್ಕವನ್ನು ಕಾಯ್ದುಕೊಳ್ಳುತ್ತದೆ. ಚಂದ್ರನ ನೆಲದಲ್ಲಿ ಪ್ರಜ್ಞಾನ್ ಗಟ್ಟಿಯಾಗಿ ನೆಲೆಯೂರಿದ ಬಳಿಕ ಈ ತಂತಿ ತುಂಡಾಗುತ್ತದೆ. ಬಳಿಕ ಅದು ವೈಜ್ಞಾನಿಕ ಸಂಶೋಧನೆಗೆ ಮುಂದಾಗುತ್ತದೆ.