ಕೊನೆಯ ಹಂತದ ಮತದಾನ: ಪಶ್ಚಿಮ ಬಂಗಾಳದ ವಿವಿಧೆಡೆ ಹಿಂಸಾತ್ಮಕ ಘಟನೆ; ಮೀಸಲು ಇವಿಎಂ ನೀರಿಗೆಸೆದ ದುಷ್ಕರ್ಮಿಗಳು

Update: 2024-06-01 05:46 GMT

Photo: NDTV

ಕೊಲ್ಕತ್ತಾ: ಇಂದು ನಡೆಯುತ್ತಿರುವ ಏಳನೇ ಮತ್ತು ಕೊನೆಯ ಹಂತದ ಲೋಕಸಭಾ ಚುನಾವಣೆ ವೇಳೆ ಪಶ್ಚಿಮ ಬಂಗಾಳದ ಹಲವೆಡೆ ಹಿಂಸಾತ್ಮಕ ಘಟನೆಗಳು ನಡೆದಿವೆ. ಜಾಧವಪುರ ಕ್ಷೇತ್ರದಲ್ಲಿ ಪಕ್ಷ ಕಾರ್ಯಕರ್ತರ ನಡುವೆ ಸಂಘರ್ಷಗಳ ವೇಳೆ ಕಚ್ಚಾ ಬಾಂಬ್‌ ಗಳನ್ನು ಎಸೆಯಲಾಗಿದ್ದರೆ, ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮೀಸಲು ಇವಿಎಂ ಒಂದನ್ನು ಗುಂಪೊಂದು ನೀರಿಗೆಸೆದಿದೆ.

ಜಾದವಪುರ ಕ್ಷೇತ್ರದ ಭಾಂಗರ್‌ ಎಂಬಲ್ಲಿ ಟಿಎಂಸಿ ಮತ್ತು ಇಂಡಿಯನ್‌ ಸೆಕ್ಯುಲರ್‌ ಫ್ರಂಟ್‌ (ಐಎಸ್‌ಎಫ್) ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ್ದು ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರರತ್ತ ಕಚ್ಚಾ ಬಾಂಬ್‌ ಎಸೆದಿದ್ದಾರೆ. ಕೊನೆಯ ಪೊಲೀಸರು ಗುಂಪನ್ನು ಚದುರಿಸಲು ಲಾಠಿಪ್ರಹಾರ ನಡೆಸಬೇಕಾಯಿತು. ಸ್ಥಳದಿಂದ ಕೆಲ ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿ ಎಂಬಲ್ಲಿ ಬೂತ್‌ ಸಂಖ್ಯೆ 40 ಮತ್ತು 41 ರಲ್ಲಿ ಒಂದು ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರಗಳನ್ನು ಗುಂಪೊಂದು ನೀರಿಗೆಸೆದಿದೆ. ಇವು ಮೀಸಲು ಯಂತ್ರಗಳಾಗಿದ್ದವು ಎಂದು ಚುನಾವಣಾ ಆಯೋಗ ಹೇಳಿದೆ ಹಾಗೂ ಚುನಾವಣಾಧಿಕಾರಿಯಿಂದ ವರದಿ ಕೇಳಿದೆ.

ಕೊಲ್ಕತ್ತಾ ಉತ್ತರ್‌ ಕ್ಷೇತ್ರದ ಕೊಸ್ಸಿಪೋರ್‌ ಎಂಬಲ್ಲಿ ಬಿಜೆಪಿ ಅಭ್ಯರ್ಥಿ ತಪಸ್‌ ರಾಯ್‌ ಕೆಲ ಬೂತ್‌ಗಳಿಗೆ ಭೇಟಿ ನೀಡಿದಾಗ ಅವರು ಟಿಎಂಸಿ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಬೇಕಾಯಿತು ಮತ್ತು ಅವರ ವಿರುದ್ಧ “ಗೋ ಬ್ಯಾಕ್”‌ ಘೋಷಣೆಗಳನ್ನು ಕೂಗಲಾಯಿತು.

ಸಂದೇಶಖಾಲಿಯ ಬರ್ಮಜೂರ್‌ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತರು ಮತ್ತು ಪೊಲೀಸರು ಶುಕ್ರವಾರ ರಾತ್ರಿ ಪೋಲಿಂಗ್‌ ಏಜಂಟರ ಮನೆಗಳಿಗೆ ತೆರಳಿ ಅವರನ್ನು ಬೆದರಿಸಿದ್ದಾರೆಂದು ಬಿಜೆಪಿ ಆರೋಪಿಸಿದೆ. ಬೆದರಿಕೆಯ ತಂತ್ರದ ವಿರುದ್ಧ ಸಂದೇಶಖಾಲಿ ಮಹಿಳೆಯರು ಮತ್ತೆ ಪ್ರತಿಭಟಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.

ಇಂದು ಪಶ್ಚಿಮ ಬಂಗಾಳದ ಒಂಬತ್ತು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News