ತೆಲಂಗಾಣದಲ್ಲಿ ಮುಸ್ಲಿಮ್ ಮೀಸಲಾತಿಯನ್ನು ಅಂತ್ಯಗೊಳಿಸುತ್ತೇವೆ : ಅಮಿತ್ ಶಾ
ಹೈದರಾಬಾದ್ : ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಮುಸ್ಲಿಮರಿಗೆ ನೀಡಿರುವ ಮೀಸಲಾತಿಯನ್ನು ಬಿಜೆಪಿ ರದ್ದುಗೊಳಿಸಲಿದೆ,ಬದಲಿಗೆ ಎಸ್ಸಿ/ಎಸ್ಟಿಗಳು ಮತ್ತು ಒಬಿಸಿಗಳಿಗೆ ಮೀಸಲಾತಿಗಳನ್ನು ಒದಗಿಸಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಗುರುವಾರ ಹೇಳಿದರು.
ಮೇಡಕ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಇಲ್ಲಿ ಬಿಆರ್ಎಸ್ ಮತ್ತು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿವೆ. ಕಾಂಗ್ರೆಸ್ ತೆಲಂಗಾಣವನ್ನು ದಿಲ್ಲಿಯ ಎಟಿಎಎಮ್ ಆಗಿಸಿದೆ. ಕಾಳೇಶ್ವರಂ ಹಗರಣ ಅಥವಾ ಭೂ ಹಗರಣವಾಗಿರಲಿ,ಬಿಆರ್ಎಸ್ ಆಡಳಿತದಲ್ಲಿ ನಡೆದಿದ್ದ ಹಗರಣಗಳ ಬಗ್ಗೆ ಕಾಂಗ್ರೆಸ್ ತನಿಖೆ ನಡೆಸುತ್ತಿಲ್ಲ. ಬಿಆರ್ಎಸ್ ಮತ್ತು ಕಾಂಗ್ರೆಸ್ ಪರಸ್ಪರ ಕೈ ಜೋಡಿಸಿವೆ. ಮೋದಿಯವರನ್ನು ಮೂರನೇ ಅವಧಿಗೆ ಆಯ್ಕೆ ಮಾಡಿ,ಅವರು ತೆಲಂಗಾಣವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುತ್ತಾರೆ ಎಂದು ಹೇಳಿದರು.
ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ವಿರುದ್ಧವೂ ದಾಳಿ ನಡೆಸಿದ ಶಾ, ‘ಮಜ್ಲಿಸ್ ಗೆ ಹೆದರಿಕೊಂಡು ಕಾಂಗ್ರೆಸ್ ಮತ್ತು ಬಿಆರ್ಎಸ್ ಎಂದಿಗೂ ತೆಲಂಗಾಣ ವಿಮೋಚನಾ ದಿನವನ್ನು ಆಚರಿಸಲಿಲ್ಲ. ನಾವು ಮಜ್ಲಿಸ್ ಗೆ ಹೆದರುವುದಿಲ್ಲ. ತೆಲಂಗಾಣ ವಿಮೋಚನಾ ದಿನವನ್ನು ಆಚರಿಸಲು ಬಿಜೆಪಿ ನಿರ್ಧರಿಸಿದೆ’ ಎಂದರು.
ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಲ್ಲಿ ಮೇ 13ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ. ಜೂ.4ರಂದು ಮತಗಳ ಎಣಿಕೆ ನಡೆಯಲಿದೆ.