ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಚುನಾವಣೆ ಗೆಲ್ಲುತ್ತೇವೆ: ರಾಹುಲ್‌ ಗಾಂಧಿ ವಿಶ್ವಾಸ

Update: 2023-09-24 11:51 GMT

ರಾಹುಲ್‌ಗಾಂಧಿ | Photo: PTI 

ಹೊಸದಿಲ್ಲಿ: ‘ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ. ತೆಲಂಗಾಣದಲ್ಲಿಯೂ ಗೆಲ್ಲುವ ಸಾಧ್ಯತೆಗಳಿವೆ. ರಾಜಸ್ಥಾನದಲ್ಲೂ ತೀವ್ರ ಸ್ಪರ್ಧೆ ಇದ್ದು, ಗೆಲ್ಲುವ ನಂಬಿಕೆ ಇದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಸ್ಸಾಂನ ಪ್ರತಿದಿನ್‌ ಮೀಡಿಯಾ ನೆಟ್‌ವರ್ಕ್‌ ರವಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಈಗ ಪ್ರತಿಪಕ್ಷಗಳು ಒಟ್ಟುಗೂಡಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆಶ್ಚರ್ಯ ಕಾದಿದೆ‘ ಎಂದು ಅಭಿಪ್ರಾಯಪಟ್ಟರು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ, ಮಿಜೋರಾಂ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಗೆಲುವಿನ ಸಾಧ್ಯತೆ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್‌ಪಿ ಸಂಸದ ದಾನಿಶ್ ಅಲಿ ವಿರುದ್ಧ ಬಿಜೆಪಿ ಲೋಕಸಭಾ ಸದಸ್ಯ ರಮೇಶ್‌ ಬಿಧೂರಿ ಕೋಮುವಾದಿ ಬಳಸಿದ್ದನ್ನು ಉಲ್ಲೇಖಿಸಿದ ಅವರು, ಜಾತಿ ಗಣತಿ ಕುರಿತ ಬೇಡಿಕೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಈ ರೀತಿಯ ತಂತ್ರದಲ್ಲಿ ತೊಡಗಿದೆ ಎಂದು ಆರೋಪಿಸಿದರು.

'ಪ್ರತಿ ಬಾರಿ ನಾವು ಪ್ರಮುಖ ವಿಷಯವನ್ನು ಪ್ರಸ್ತಾಪಿಸಿದಾಗ, ಗಮನವನ್ನು ಬೇರೆಡೆ ಸೆಳೆಯಲು ಅವರು ಇಂತಹ ತಂತ್ರವನ್ನು ಬಳಸುತ್ತಾರೆ. ಇದನ್ನು ನಿಭಾಯಿಸುವ ಕುರಿತ ಪಾಠವನ್ನು ನಾವು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಲಿತಿದ್ದೇವೆ. ಅಲ್ಲಿ, ಜನರ ಮುಂದೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ನಿಮಗಾಗಿ ಜಾರಿಗೊಳಿಸಲಿದ್ದೇವೆ ಎಂದು ಸ್ಪಷ್ಟ ಚಿಂತನೆ ಇಟ್ಟೆವು. ಜನರ ಮನಸ್ಸಿನಲ್ಲಿ ಉಳಿಯುವಂತೆ ನಿರ್ವಹಿಸಿದೆವು‘ ಎಂದು ಕರ್ನಾಟಕ ಚುನಾವಣೆಯ ಗೆಲುವಿನ ಬಗ್ಗೆ ಹಂಚಿಕೊಂಡರು.

’ಕೇಂದ್ರ ಸರಕಾರ ಮನಸು ಮಾಡಿದರೆ ಮಹಿಳಾ ಮೀಸಲಾತಿ ಮಸೂದೆಯನ್ನು ನಾಳೆಯೇ ಜಾರಿಗೊಳಿಸಬಹುದು. ಮಸೂದೆಗೂ ಜಾತಿ ಗಣತಿಗೂ, ಕ್ಷೇತ್ರ ಪುನರ್ವಿಂಗಡಣೆಗೂ ಯಾವುದೇ ಸಂಬಂಧವಿಲ್ಲ. ಮಹಿಳಾ ಮೀಸಲಾತಿ ಮಸೂದೆಯು 10 ವರ್ಷದ ನಂತರ ಜಾರಿಯಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಈಗಲೇ ಮಾಡಿ ಎಂಬುದು ಕಾಂಗ್ರೆಸ್ ಬೇಡಿಕೆ‘ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News