ಪಶ್ಚಿಮ ಬಂಗಾಳ: ಜನನಿಬಿಡ ಉಪಹಾರ ಗೃಹದ ಹೊರಗೆ ಯುವತಿಯ ಬೆನ್ನಟ್ಟಿ, ಇರಿದು ಹತ್ಯೆ

ಸಾಂದರ್ಭಿಕ ಚಿತ್ರ
ಕೋಲ್ಕತಾ: ಕೋಲ್ಕತ್ತಾದ ಪೂರ್ವ ಅಂಚಿನಲ್ಲಿರುವ ಜನಪ್ರಿಯ ಉಪಹಾರ ಗೃಹದ ಹೊರಗೆ ಸಾರ್ವಜನಿಕರ ಸಮ್ಮುಖದಲ್ಲೇ ಅಪ್ರಾಪ್ತ ಸೇರಿದಂತೆ ಮೂವರು ವ್ಯಕ್ತಿಗಳು ಯುವತಿಯನ್ನು ಬೆನ್ನಟ್ಟಿ ಇರಿದು ಹತ್ಯೆಗೈದ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಹತ್ಯೆಗೀಡಾದ ಯುವತಿಯನ್ನು ರೋಫಿಯಾ ಸಾಕಿಲ್ (20) ಎಂದು ಗುರುತಿಸಲಾಗಿದೆ. ಉಪಹಾರ ಗೃಹದ ಸಮೀಪ ನಿಲ್ಲಿಸಿದ್ದ ಕಾರಿನಿಂದ ಗುರುವಾರ ಸಂಜೆ ಸಾಕಿಲ್‌ರನ್ನು ಹೊರಗೆಳೆದು, ಅಟ್ಟಿಸಿಕೊಂಡು ಹೋಗಿ ಹಲವು ಬಾರಿ ಇರಿದು ಹತ್ಯೆಗೈಯಲಾಗಿದೆ ಎಂದು ಅವರು ಹೇಳಿದ್ದಾರೆ.
ನರ್ಕೆಲ್ದಂಗ ಪ್ರದೇಶದ ರಾಜ ರಾಮನಾರಾಯಣ ಬೀದಿಯ ನಿವಾಸಿಯಾಗಿರುವ ಯುವತಿ ಹಾಗೂ ಮುಹಮ್ಮದ್ ಫಾರೂಕ್ ಅನ್ಸಾರಿ ಎಂಬವರ ನಡುವಿನ ವಿವಾಹೇತರ ಸಂಬಂಧದ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಅನ್ಸಾರಿ ಕುಟುಂಬದ ಸದಸ್ಯರು ಈ ದಾಳಿ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಗತಿ ಮೈದಾನ್ ಪೊಲೀಸ್ ಠಾಣಾ ಪ್ರದೇಶದಲ್ಲಿರುವ ಈಸ್ಟರ್ನ್ ಮೆಟ್ರೋಪಾಲಿಟಿನ್ ಬೈಪಾಸ್ ಸಮೀಪ ಇರುವ ಧಾಬಾಕ್ಕೆ ಮಹಿಳೆ ಅನ್ಸಾರಿಯೊಂದಿಗೆ ಗುರುವಾರ ರಾತ್ರಿ ಸುಮಾರು 8.30ಕ್ಕೆ ಆಗಮಿಸಿದ ಸಂದರ್ಭ ಈ ಘಟನೆ ನಡೆದಿದೆ ಎಂದು ಪೊಲೀಸರು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ಅನ್ಸಾರಿ ಹಾಗೂ ಸಾಕಿಲ್‌ರ ಕಾರನ್ನು ಓರ್ವ ಮಹಿಳೆ, 22 ವರ್ಷದ ಯುವಕ ಹಾಗೂ ಹದಿಹರೆಯದ ಹುಡುಗ ಹಿಂಬಾಲಿಸಿದ್ದರು. ಢಾಬಾದಲ್ಲಿ ಕಾರು ನಿಲ್ಲಿಸಿದಾಗ ಹದಿಹರೆಯದ ಹುಡುಗ ಸಾಕಿಲ್‌ಳನ್ನು ಕಾರಿನಿಂದ ಹೊರಗೆಳೆದು ಅಟ್ಟಿಸಿಕೊಂಡು ಹೋಗಿ ಹಲವು ಬಾರಿ ಇರಿದಿದ್ದಾನೆ.
ತೀವ್ರ ರಕ್ತಸ್ರಾವದಿಂದ ಜೀವ ಉಳಿಸಿಕೊಳ್ಳಲು ಓಡಿ ಹೋಗುತ್ತಿರುವ ಹಾಗೂ ಸಹಾಯಕ್ಕಾಗಿ ಕೂಗುತ್ತಿರುವ ಮಹಿಳೆಯನ್ನು ಉಪಹಾರ ಗೃಹದಲ್ಲಿದ್ದ ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ದಾಳಿಕೋರರು ಆಕೆಯನ್ನು ಅಟ್ಟಿಸಿಕೊಂಡು ಹೋಗಿ ನಿರಂತರ ಇರಿದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈಗ ಪರಾರಿಯಾಗಿರುವ ಅನ್ಸಾರಿ ದಾಳಿಕೋರರ ತಂಡದ ಭಾಗವಾಗಿದ್ದ ಮಹಿಳೆಯ ಪತಿ ಎಂದು ಅವರಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.