ಪಶ್ಚಿಮ ಬಂಗಾಳ | ರಂಗಭೂಮಿ ಕಲಾವಿದ ಬಿಪ್ಲಬ್ ಬಂದೋಪಾಧ್ಯಾಯರಿಂದ ರಾಜ್ಯ ಪ್ರಶಸ್ತಿ ವಾಪಸ್

Update: 2024-09-03 15:15 GMT

ಬಿಪ್ಲಬ್ ಬಂದೋಪಾಧ್ಯಾಯ 

ಕೋಲ್ಕತಾ : ಇಲ್ಲಿನ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ವಿವಿಧ ಸಾಮಾಜಿಕ ಸಂಘಟನೆಗಳು ಪ್ರತಿಭಟನೆಯನ್ನು ಮುಂದುವರಿಸಿರುವಂತೆಯೇ, ಬಂಗಾಳಿಯ ಖ್ಯಾತ ರಂಗಭೂಮಿ ಕಲಾವಿದ ಬಿಪ್ಲಬ್ ಬಂದೋಪಾಧ್ಯಾಯ ಅವರು ರಾಜ್ಯ ಸರಕಾರವು ತನಗೆ ನೀಡಿದ್ದ ‘ ಶ್ರೇಷ್ಠ ರಂಗನಿರ್ದೇಶಕ’ ಪುರಸ್ಕಾರವನ್ನು ಹಿಂತಿರುಗಿಸುವುದಾಗಿ ಘೋಷಿಸಿದ್ದಾರೆ.

ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಪ್ರತಿಭಟನೆಯಾಗಿ ಈ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗ ನಾಟ್ಯ ಅಕಾಡಮಿ ತನಗೆ ಪ್ರದಾನ ಮಾಡಿದ್ದ ಪುರಸ್ಕಾರವನ್ನು ಹಾಗೂ 30 ಸಾವಿರ ರೂ.ಗಳ ನಗದು ಉಡುಗೊರೆಯನ್ನು ಹಿಂತಿರುಗಿಸುವುದಾಗಿ ಖ್ಯಾತ ನಾಟಕರಚನಕಾರ ಹಾಗೂ ನಿರ್ದೇಶಕ ಬಂದೋಪಾಧ್ಯಾಯ ಅವರು ತಿಳಿಸಿದ್ದಾರೆ.

ಆಗಸ್ಟ್ 9ರಂದು ಆರ್.ಜಿ.ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕಣದ ಕುರಿತ ವಾಸ್ತವಾಂಶಗಳನ್ನು ಮುಚ್ಚಿಹಾಕಲು ರಾಜ್ಯ ಸರಕಾರ ಹಾಗೂ ಪಕ್ಷಪಾತಿ ಪೊಲೀಸ್ ಪಡೆಗಳು ಬಯಸುತ್ತಿವೆಯೆಂದು ಬಂದೋಪಾಧ್ಯಾಯ ಅವರು ಆಪಾದಿಸಿದ್ದಾರೆ.

ಪ್ರಶಸ್ತಿಗಳನ್ನು ಪಡೆಯುವುದಕ್ಕೆ, ಹೊಗಳುಭಟ್ಟಂಗಿತನ, ಆಡಳಿತಕ್ಕೆ ನಿಶರ್ತವಾದ ಬೆಂಬಲ ಮುಖ್ಯ ಮಾನದಂಡವೇ ಹೊರತು ಪ್ರತಿಭೆ ಅಥವಾ ಅರ್ಹತೆಯಲ್ಲ ಎಂದು ನಾನು ಭಾವಿಸುತ್ತೇನೆ. ಫೆಬ್ರವರಿಯಲ್ಲಿ ನಾನು ಪುರಸ್ಕಾರವನ್ನು ಸ್ವೀಕರಿಸುವಾಗ ಅದು ನನ್ನ ಗಮನಕ್ಕೆ ಬಾರಲಿಲ್ಲ ಎಂದವರು ಮಾರ್ಮಿಕವಾಗಿ ಹೇಳಿದ್ದಾರೆ.

‘‘ ಆರ್.ಜಿ.ಕರ್ ಕಾಲೇಜ್ ಆಸ್ಪತ್ರೆಯಲ್ಲಿ ನಡೆದ ಘಟನೆಯ ಬಳಿಕ ಸರಕಾರವು ಪ್ರದರ್ಶಿಸಿದ ನಿರ್ಲಜ್ಜ ಹಾಗೂ ಅತಿರೇಕದ ವರ್ತನೆಯನ್ನು ಕಂಡು ಮಾನವನಾಗಿ ನನಗೆ ನಾಚಿಕೆಯಾಗಿದೆ ಹಾಗೂ ವೇದನೆಯಾಗಿದೆ. ಸರಕಾರದಿಂದ ನೀಡಲ್ಪಟ್ಟ ಯಾವುದೇ ಪ್ರಶಸ್ತಿಯನ್ನು ತನ್ನ ಬಳಿ ಉಳಿಸಿಕೊಳ್ಳಲು ಇನ್ನು ಮುಂದೆ ತನಗೆ ಸಾಧ್ಯವಾಗದು” ಎಂದವರು ಹೇಳಿದ್ದಾರೆ.

ಪುರಸ್ಕಾರವನ್ನು ಹಿಂತಿರುಗಿಸುವ ತನ್ನ ನಿರ್ಧಾರದ ಬಗ್ಗೆ ಅಕಾಡಮಿಗೆ ಮಾಹಿತಿ ನೀಡಿದ್ದೇನೆ ಎಂದು ಬಂದೋಪಾಧ್ಯಾಯ ವರದಿಗಾರರಿಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News