ಪಶ್ಚಿಮ ಬಂಗಾಳ| ಕಳ್ಳತನದ ಶಂಕೆಯಲ್ಲಿ ಮತ್ತೋರ್ವ ವ್ಯಕ್ತಿಯ ಥಳಿಸಿ ಹತ್ಯೆಗೈದ ಗುಂಪು
ಕೋಲ್ಕತ್ತಾ: ಕಳ್ಳತನ ಮಾಡಿದ್ದಾನೆಂಬ ಶಂಕೆಯ ಮೇಲೆ ಗುಂಪೊಂದು ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆಗೈದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಅಝ್ಗರ್ ಮೊಲ್ಲಾ ಎಂದು ಗುರುತಿಸಲಾಗಿದ್ದು, ಕೋಲ್ಕತ್ತಾದಿಂದ ಸುಮಾರು 30 ಕಿಮೀ ದೂರವಿರುವ ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಫುಲ್ಬರಿ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, "ಆರೋಪಿಯು ಪ್ರಜ್ಞಾಹೀನವಾಗಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಆದರೆ, ಆತ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು" ಎಂದು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಈ ಸಂಬಂಧ ಯಾವುದೇ ದೂರು ದಾಖಲಿಸಿಲ್ಲ ಹಾಗೂ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡದೆ, ಆತನ ಮೃತದೇಹವನ್ನು ತಮ್ಮೊಂದಿಗೆ ಕೊಂಡೊಯ್ದರು ಎಂದೂ ಅವರು ಹೇಳಿದ್ದಾರೆ.
"ಈ ಸಂಬಂಧ ನಾವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಘಟನಾ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆ ದೃಶ್ಯಾವಳಿಯಲ್ಲಿ ಮೃತ ವ್ಯಕ್ತಿಯನ್ನು ಗುಂಪು ತೀವ್ರವಾಗಿ ಥಳಿಸಿರುವುದು ಕಂಡು ಬಂದಿದೆ" ಎಂದೂ ಅವರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಇಂತಹುದೇ ಸರಣಿ ಘಟನೆಗಳು ನಡೆಯುತ್ತಿದ್ದು, ಜೂನ್ 28ರಂದು ಕೋಲ್ಕತ್ತಾದ ಕೇಂದ್ರ ಬೌಬಝಾರ್ ಪ್ರದೇಶದಲ್ಲಿರುವ ರಾಜ್ಯ ಸರಕಾರದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಮೊಬೈಲ್ ಫೋನ್ ಕದ್ದ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆಗೈದಿದ್ದರು.
ಇದಾದ ಒಂದು ದಿನದ ನಂತರ, ಸಾಲ್ಟ್ ಲೇಕ್ ಪ್ರದೇಶದಲ್ಲೂ ಕೂಡಾ ಇಂತಹುದೇ ಶಂಕೆಯ ಮೇಲೆ ಗುಂಪೊಂದು ಮತ್ತೊಬ್ಬ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದಿತ್ತು. ಇತರೆ ಜಿಲ್ಲೆಗಳಲ್ಲಿ ನಡೆದ ಗುಂಪು ಥಳಿತ ಪ್ರಕರಣಗಳಲ್ಲೂ ಇಬ್ಬರು ಮೃತಪಟ್ಟಿದ್ದರು.