ಬಿಜೆಪಿ ಅಧಿಕಾರಕ್ಕೆ ಬಂದರೆ ಆದಿವಾಸಿಗಳ ಹಕ್ಕುಗಳ ರಕ್ಷಣೆಗೆ ಜಾರ್ಖಂಡ್‌ ನಲ್ಲಿ ಶ್ವೇತ ಪತ್ರ : ಅಮಿತ್ ಶಾ

Update: 2024-07-20 13:58 GMT

 ಕೇಂದ್ರ ಗೃಹ ಸಚಿವ ಅಮಿತ್ ಶಾ | PTI 


ರಾಂಚಿ: ಭಾರಿ ಪ್ರಮಾಣದ ಒಳ ನುಸುಳುವಿಕೆಯಿಂದಾಗಿ ಜಾರ್ಖಂಡ್‌ ರಾಜ್ಯದಲ್ಲಿನ ಆದಿವಾಸಿಗಳ ಜನಸಂಖ್ಯೆ ಕುಸಿಯುತ್ತಿದ್ದು, ಒಂದು ವೇಳೆ ಬಿಜೆಪಿಯೇನಾದರೂ ಜಾರ್ಖಂಡ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಆದಿವಾಸಿಗಳ ಭೂಮಿ ಹಾಗೂ ಹಕ್ಕುಗಳನ್ನು ರಕ್ಷಿಸಲು ಜಾರ್ಖಂಡ್‌ ಭೌಗೋಳಿಕತೆ ಕುರಿತು ಶ್ವೇತ ಪತ್ರ ಹೊರಡಿಸಲಿದೆ ಎಂದು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದರು.

ಪ್ರಭಾತ್ ತಾರಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕಾರಿಣಿಯ ವಿಸ್ತರಿತ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 81 ವಿಧಾನಸಭಾ ಕ್ಷೇತ್ರಗಳ ಪೈಕಿ 52 ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಅರಳಿರುವುದರಿಂದ, ಬಿಜೆಪಿಯು ರಾಜ್ಯದಲ್ಲಿ ಸರಕಾರ ರಚಿಸುವುದು ನಿಶ್ವಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ನಾವು ಸರಕಾರ ರಚಿಸಿದ ನಂತರ, ಆದಿವಾಸಿಗಳ ಭೂಮಿ ಹಾಗೂ ಹಕ್ಕುಗಳನ್ನು ರಕ್ಷಿಸಲು ಜಾರ್ಖಂಡ್‌ ಭೌಗೋಳಿಕತೆ ಕುರಿತು ಶ್ವೇತ ಪತ್ರ ಹೊರಡಿಸಲಿದ್ದೇವೆ" ಎಂದು ಅವರು ಅವರು ಭರವಸೆ ನೀಡಿದರು.

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಹೆಸರನ್ನು ಉಲ್ಲೇಖಿಸದೆ, "ಮತ ಬ್ಯಾಂಕ್ ತುಷ್ಟೀಕರಣ ರಾಜಕಾರಣದಿಂದಾಗಿ, ಜಾರ್ಖಂಡ್‌ ರಾಜ್ಯದ ಆದಿವಾಸಿ ಮುಖ್ಯಮಂತ್ರಿಯು ಲವ್ ಜಿಹಾದ್ ಹಾಗೂ ಭೂಮಿ ಜಿಹಾದ್‌ಗೆ ಕೀಲಿ ಕೈ ಆಗಿದ್ದಾರೆ" ಎಂದೂ ಅವರು ವಾಗ್ದಾಳಿ ನಡೆಸಿದರು.

ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಜಾರ್ಖಂಡ್‌ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ವಿರೋಧ ಪಕ್ಷವಾದ ಬಿಜೆಪಿ ಈಗಿನಿಂದಲೇ ಚುನಾವಣಾ ತಾಲೀಮು ನಡೆಸುತ್ತಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಜಾರ್ಖಂಡ್‌ ರಾಜ್ಯದ 81 ವಿಧಾನಸಭಾ ಕ್ಷೇತ್ರಗಳ ಪೈಕಿ 52 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿರುವುದರಿಂದ, ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸದಲ್ಲಿ ಬೀಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News