ಸರ್ವೋಚ್ಛ ನ್ಯಾಯಾಲಯದ 5 ಕೋರ್ಟ್ ರೂಮ್ ಗಳಲ್ಲಿ ವೈಫೈ: ಸಿಜೆಐ
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ ಮೊದಲ 5 ಕೋರ್ಟ್ ರೂಮ್ ಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ರವಿವಾರ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಡಿಜಿಟಲೀಕರಣಗೊಳ್ಳುವ ದಿಶೆಯಲ್ಲಿ ಇದು ಒಂದು ಪ್ರಮುಖ ಹೆಜ್ಜೆ ಎಂದು ಅವರು ಹೇಳಿದ್ದಾರೆ.
ಎಲ್ಲಾ ವಕೀಲರು, ಕಕ್ಷಿದಾರರು ಹಾಗೂ ಸುಪ್ರೀಂ ಕೋರ್ಟ್ ಗೆ ಭೇಟಿ ನೀಡುವ ಪತ್ರಕರ್ತರು ಹಾಗೂ ಇತರ ಪಾಲುದಾರರರಿಗೆ ಈ ಸೌಲಭ್ಯ ದೊರೆಯಲಿದೆ.
ಇ-ಉಪಕ್ರಮಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ‘‘ಎಸ್ಸಿಐ ಡಬ್ಲ್ಯುಐಎಫ್ಐ’’ಯಲ್ಲಿ ಲಾಗಿಂಗ್ ಮಾಡುವ ಮೂಲಕ ಈ ಸೌಲಭ್ಯ ಪಡೆಯಬಹುದು.
‘‘ನಾವು ಕೋರ್ಟ್ 1ರಿಂದ 5ರ ವರೆಗೆ ವೈಫೈ ಸೌಲಭ್ಯ ಕಲ್ಪಿಸಿದ್ದೇವೆ. ಬಾರ್ ಕೌನ್ಸಿಲ್ ನ ಕೊಠಡಿಯಲ್ಲಿ ಕೂಡ ವೈಫೈ ಸೌಲಭ್ಯ ಒದಗಿಸಿದ್ದೇವೆ. ಇನ್ನು ಮುಂದೆ ಎಲ್ಲಾ ಕೋರ್ಟ್ ರೂಮ್ ಗಳಲ್ಲಿ ವೈಫೈ ಸೌಲಭ ಕಲ್ಪಿಸಲಿದ್ದೇವೆ. ಪುಸ್ತಕ ಹಾಗೂ ಕಾಗದಗಳು ಇರುವುದಿಲ್ಲ. ಅಂದರೆ, ನಾವು ಅದನ್ನು ಮುಟ್ಟುವುದೇ ಇಲ್ಲ ಎಂದು ಇದರ ಅರ್ಥವಲ್ಲ’’ ಎಂದು ಚಂದ್ರಚೂಡ ಅವರು ಹೇಳಿದರು.
‘‘ಎಲ್ಲವೂ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬ ಬಗ್ಗೆ ಹಿಂಬರಹ ನೀಡಿ’’ ಎಂದು ಅವರು ತಿಳಿಸಿದರು.
ಆರು ತಿಂಗಳ ಬೇಸಿಗೆ ರಜಾಕಾಲದ ಬಳಿಕ ಸುಪ್ರೀಂ ಕೋರ್ಟ್ ಸೋಮವಾರ ಮರು ಆರಂಭವಾಗಿದೆ.