ಉತ್ತರಾಖಂಡ ಸುರಂಗದಲ್ಲಿ ಸಿಲುಕಿದ ಕಾರ್ಮಿಕರು ಕ್ರಿಸ್‍ಮಸ್ ವೇಳೆ ಮನೆಗೆ ವಾಪಾಸು: ವಿದೇಶಿ ತಜ್ಞರು
ಉತ್ತರಕಾಶಿ: ಸಿಲ್ಕ್‍ಯಾರಾ ಸುರಂಗದ ಅವಶೇಷಗಳ ನಡುವೆ ರಂಧ್ರ ಕೊರೆಯುವ ಬೈರಿಗೆ ಯಂತ್ರದ ಬ್ಲೇಡ್‍ಗಳು ಶನಿವಾರ ಬೆಳಿಗ್ಗೆ ಅವಶೇಷಗಳಡಿ ಸಿಲುಕಿ ಹಾಕಿಕೊಂಡಿರುವ ಹಿನ್ನೆಲೆಯಲ್ಲಿ 13 ದಿನಗಳಿಂದ ಸಿಕ್ಕಿಹಾಕಿಕೊಂಡಿರುವ 41 ಮಂದಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯಕ್ಕೆ ಮತ್ತೊಂದು ತಡೆ ಎದುರಾಗಿದ್ದು, ರಕ್ಷಣಾ ಕಾರ್ಯ ಕೆಲ ವಾರಗಳಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಅಧಿಕಾರಿಗಳು ಇದೀಗ ಎರಡು ಪರ್ಯಾಯಗಳನ್ನು ಯೋಜಿಸಿದ್ದು, ಉಳಿದ 10-12 ಮೀಟರ್ ದೂರವನ್ನು ಮಾನವಶಕ್ತಿಯಿಂದ ಕೊರೆಯುವುದು ಒಂದಾದರೆ, 86 ಮೀಟರ್ ಮೇಲಿನಿಂದ ಮತ್ತೊಂದು ರಂಧ್ರವನ್ನು ಕೊರೆಯುವುದು ಇನ್ನೊಂದು ಆಯ್ಕೆ.
ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ (ಎನ್‍ಡಿಎಂಎ) ಸದಸ್ಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯ್ಯದ್ ಅತಾ ಹುಸೇನ್ , ತಾಳ್ಮೆಯಿಂದ ಇರುವಂತೆ ಮನವಿ ಮಾಡಿಕೊಂಡಿದ್ದು, ಈ ಕಾರ್ಯಾಚರಣೆ ಸುಧೀರ್ಘ ಅವಧಿಯನ್ನು ತೆಗೆದುಕೊಳ್ಳಬಹುದು ಎಂಬ ಸುಳಿವು ನೀಡಿದ್ದಾರೆ. ವಿಕೋಪ ಸ್ಥಳದಲ್ಲಿರುವ ಅಂತರರಾಷ್ಟ್ರೀಯ ಸುರಂಗ ಕೊರೆಯುವ ಸಲಹೆಗಾರ ಅರ್ನಾಲ್ಡ್ ಡಿಕ್ಸ್ ಈ ಬಗ್ಗೆ ಹೇಳಿಕೆ ನೀಡಿ, "ಕ್ರಿಸ್‍ಮಸ್ ಉಡುಗೊರೆ"ಯಾಗಿ ಕಾರ್ಮಿಕರನ್ನು ಹೊರತರಲು ಸಾಧ್ಯವಾಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಸಿಲುಕಿಕೊಂಡಿರುವ ಕಾರ್ಮಿಕರನ್ನು ರಕ್ಷಿಸುವ ಸಲುವಾಗಿ ಈಗಾಗಲೇ ಕೊರೆದಿರುವ 47 ಮೀಟರ್ ಉದ್ದದ ಸುರಂಗದ ಒಳಹೊಕ್ಕು ಕಾರ್ಮಿಕರು ಉಳಿಕೆ ದೂರವನ್ನು ಕೊರೆಯುವುದು ತಜ್ಞರ ಮುಂದಿರುವ ಒಂದು ಆಯ್ಕೆ. ಇಕ್ಕಟ್ಟಿನ ಸ್ಥಳದಲ್ಲಿ ಉಳಿಕೆ ದೂರವನ್ನು ಮಾನವಶಕ್ತಿಯಿಂದ ಕೊರೆಯುವುದು ನಿಜಕ್ಕೂ ಸವಾಲಿನ ಕೆಲಸ ಎನ್ನಲಾಗಿದೆ.
ಈ ಮಧ್ಯೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿಕೆ ನೀಡಿ, ಸಿಲುಕಿಕೊಂಡಿರುವ ಯಂತ್ರವನ್ನು ಹೊರ ತೆಗೆದ ತಕ್ಷಣ ಕಾಮಗಾರಿ ಆರಂಭವಾಗಲಿದೆ ಎಂಬ ಸುಳಿವು ನೀಡಿದ್ದಾರೆ. ಈಗಾಗಲೇ ಸ್ಥಳಕ್ಕೆ ಶಕ್ತಿಶಾಲಿ ಸಾಧನಗಳನ್ನು ಲಂಬಾಕಾರದ ರಣಧ್ರಕ್ಕಾಗಿ ತರಲಾಗಿದ್ದು, ಈ ಕಾಮಗಾರಿ ಕೆಲ ವಾರಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಈ ಕಾಮಗಾರಿ ಮುಂದಿನ 24 ರಿಂದ 36 ಗಂಟೆಗಳಲ್ಲಿ ಆರಂಭವಾಗಲಿದೆ ಎಂದು ಹುಸೈನ್ ವಿವರಿಸಿದ್ದಾರೆ.