ಜಾಧವಪುರ ವಿವಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ಶ್ರೀರಾಮನ ಪೂಜೆ ; ಅಯೋಧ್ಯೆ ಸಮಾರಂಭಕ್ಕೆ ಎಸ್ಎಫ್ಐ ವಿರೋಧ
ಕೋಲ್ಕತಾ: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿಯ ಜಾಧವಪುರ ವಿವಿ ಕ್ಯಾಂಪಸ್ ನಲ್ಲಿ ಎಬಿವಿಪಿ ಕಾರ್ಯಕರ್ತರು ಶ್ರೀರಾಮನನ್ನು ಪೂಜಿಸಿದರು.
ಇದೇ ವೇಳೆ ವಿವಿಯ ಪ್ರಮುಖ ವಿದ್ಯಾರ್ಥಿ ಒಕ್ಕೂಟಗಳಲ್ಲೊಂದಾದ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ) ಕ್ಯಾಂಪಸ್ ನಲ್ಲಿ ಪ್ರತಿಭಟನಾ ರ್ಯಾಲಿಯನ್ನು ನಡೆಸಿತು. ಅದು ವಿಚಾರ ಸಂಕಿರಣವನ್ನೂ ಆಯೋಜಿಸಿದ್ದು,‘ಫ್ಯಾಸಿಸ್ಟ್ ಆಡಳಿತದಿಂದ ಇತಿಹಾಸವನ್ನು ಬದಲಿಸುವ ಮತ್ತು ಸಮಾಜವನ್ನು ವಿಭಜಿಸುವ ಯಾವುದೇ ಪ್ರಯತ್ನ ’ವನ್ನು ಭಾಷಣಕಾರರು ಖಂಡಿಸಿದರು.
ಶ್ರೀರಾಮನ ಪೂಜೆಗೆ ಸುಮಾರು 50 ಜನರು ಸೇರಿದ್ದರು ಮತ್ತು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಿದರು. ವಿವಿಯ ಕೆಲವು ಪ್ರಾಧ್ಯಾಪಕರೂ ಉಪಸ್ಥಿತರಿದ್ದರು ಎಂದು ಎಬಿವಿಪಿ ರಾಜ್ಯ ಸಮಿತಿ ನಾಯಕ ಸಪ್ತರ್ಷಿ ಸರ್ಕಾರ್ ತಿಳಿಸಿದರು.
ಕಲಾವಿಭಾಗದ ವಿದ್ಯಾರ್ಥಿಗಳ ಒಕ್ಕೂಟ (ಎಎಫ್ಎಸ್ಯು)ವು, ಆರೆಸ್ಸೆಸ್-ಬಿಜೆಪಿಯ ಯಾವುದೇ ಕೋಮುವಾದಿ ಮತ್ತು ಫ್ಯಾಸಿಸ್ಟ್ ಉದ್ದೇಶವನ್ನು ತಿರಸ್ಕರಿಸುತ್ತದೆ. ಭಾರತದ ಸಂಸ್ಕೃತಿ,ಪರಂಪರೆ ಮತ್ತು ಬಹುತ್ವದ ಗುಣಲಕ್ಷಣಗಳನ್ನು ರಕ್ಷಿಸಲು ಸಂದೇಶವನ್ನು ಎತ್ತಿ ಹಿಡಿಯಲು ನಾವು ಸಾಂಸ್ಕೃತಿಕ ಕಾರ್ಯಕ್ರಮಗಳು,ಚರ್ಚೆಗಳು ಮತ್ತು ಚಿತ್ರ ಪ್ರದರ್ಶನಗಳನು ಆಯೋಜಿಸುತ್ತಿದ್ದೇವೆ ಎಂದು ವಿವಿಯ ಎಸ್ಎಫ್ಐ ನಾಯಕ ಸೌರಯದಿಪ್ತೊ ರಾಯ್ ತಿಳಿಸಿದರು.
ಅಖಿಲ ಬಂಗಾಳ ವಿವಿ ಶಿಕ್ಷಕರ ಸಂಘವು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ,ಶಿಕ್ಷಣ ಸಚಿವ ಭೃತ್ಯ ಬಸು ಮತ್ತು ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರಿಗೆ ಬರೆದಿರುವ ಪತ್ರದಲ್ಲಿ, ಜಾತ್ಯತೀತತೆಯನ್ನು ಉಲ್ಲಂಘಿಸುವ ಹಾಗೂ ಶಿಕ್ಷಣ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಯಾವುದೇ ಸಂಬಂಧವಿಲ್ಲದ ಧಾರ್ಮಿಕ ಚಟುವಟಿಕೆಗಳನ್ನು ಕ್ಯಾಂಪಸ್ ನಲ್ಲಿ ನಡೆಸುವ ಪ್ರಯತ್ನಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದೆ.
ಕ್ಯಾಂಪಸ್ ನಲ್ಲಿ ಶಾಂತಿಯನ್ನು ಕದಡದಿದ್ದರೆ ಅಥವಾ ಶೈಕ್ಷಣಿಕ ವಾತಾವರಣವನ್ನು ಉಲ್ಲಂಘಿಸದಿದ್ದರೆ ಯಾವುದೇ ಗುಂಪು ನಡೆಸುವ ಕಾರ್ಯಕ್ರಮಕ್ಕೂ ವಿವಿಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಯೋರ್ವರು ತಿಳಿಸಿದರು.